ಮುಂಬೈ : ಉಸಿರಾಟದ ತೊಂದರೆಯಿಂದಾಗಿ ಅ.31ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (89) ಅವರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರ ಚಿಕಿತ್ಸೆಯು ಇನ್ನು ಮುಂದೆ ಮನೆಯಲ್ಲಿಯೇ ಮುಂದುವರಿಯಲಿದೆ ಎಂದು ಅವರ ಕುಟುಂಬ ಮತ್ತು ವೈದ್ಯರು ಖಚಿತಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ವೈದ್ಯ ಡಾ. ಪ್ರತೀತ್ ಸಮ್ದಾನಿ, “ಧರ್ಮೇಂದ್ರ ಅವರನ್ನು ಇಂದು ಬೆಳಗ್ಗೆ 7:30ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ಕುಟುಂಬ ನಿರ್ಧರಿಸಿದೆ,” ಎಂದು ತಿಳಿಸಿದ್ದಾರೆ.
ಧರ್ಮೇಂದ್ರ ಅವರ ಕುಟುಂಬವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಧರ್ಮೇಂದ್ರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಈ ಸಮಯದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳಿಗೆ ಅವಕಾಶ ನೀಡದೆ, ಅವರ ಮತ್ತು ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮ ಮತ್ತು ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ. ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ನಮ್ಮ ಕೃತಜ್ಞತೆಗಳು,” ಎಂದು ಹೇಳಿದೆ.
ನವೆಂಬರ್ 10ರಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದ ಧರ್ಮೇಂದ್ರ ಅವರ ಆರೋಗ್ಯದ ಕುರಿತು ಮಂಗಳವಾರ ಸುಳ್ಳು ವದಂತಿಗಳು ಹಬ್ಬಿದ್ದವು. ಇದನ್ನು ತೀವ್ರವಾಗಿ ಖಂಡಿಸಿದ್ದ ಅವರ ಪುತ್ರಿ ಇಶಾ ಡಿಯೋಲ್ ಮತ್ತು ಪತ್ನಿ ಹೇಮಾ ಮಾಲಿನಿ, “ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸುದ್ದಿಗಳನ್ನು ಹರಡಬೇಡಿ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪುತ್ರ ಸನ್ನಿ ಡಿಯೋಲ್ ಕೂಡ, “ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕುಟುಂಬವು ಪವಾಡಕ್ಕಾಗಿ ಆಶಿಸುತ್ತಿದೆ,” ಎಂದು ತಿಳಿಸಿದ್ದರು.
ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ಕುಟುಂಬ ಸದಸ್ಯರಲ್ಲದೇ, ಚಿತ್ರರಂಗದ ಗಣ್ಯರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಗೋವಿಂದ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
‘ಶೋಲೆ’, ‘ಧರಂ ವೀರ್’, ‘ಚುಪ್ಕೆ ಚುಪ್ಕೆ’ ಯಂತಹ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಧರ್ಮೇಂದ್ರ, ಇತ್ತೀಚೆಗೆ ‘ತೇರಿ ಬಾತೋಂ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟನೆಯ ‘ಇಕ್ಕಿಸ್’ ಅವರ ಮುಂದಿನ ಚಿತ್ರವಾಗಿದೆ.
ಇದನ್ನೂ ಓದಿ : ಬೆಂಗಳೂರು | ಯುವಕನನ್ನು ಲಾಡ್ಜ್ಗೆ ಕರೆದೊಯ್ದು ಚಿನ್ನಾಭರಣ ದೋಚಿ ಪರಾರಿಯಾದ ಯುವತಿ!



















