ಬೆಂಗಳೂರು: ಯುಪಿಐ ಪೇಮೆಂಟ್, ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಎಷ್ಟು ಅನುಕೂಲವಾಗಿದೆಯೋ, ಅಷ್ಟೇ ಅನನುಕೂಲವೂ ಆಗಿದೆ. ಅದರಲ್ಲೂ, ಆನ್ ಲೈನ್ ವಂಚಕರು ಜನರಿಗೆ ಹಲವು ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಇಂತಹ ವಂಚನೆಗಳಲ್ಲಿ ಕಾಲ್ ಮರ್ಜ್ ಮಾಡುವ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕುವುದೂ ಒಂದಾಗಿದೆ. ಹಾಗಾಗಿ, ಸಾರ್ವಜನಿಕರು ಎಚ್ಚರದಿಂದ ಇರಬೇಕಾಗಿದೆ.
ಹೌದು, ವಂಚಕರು ಗ್ರಾಹಕರಿಗೆ ಕರೆ ಮಾಡಿ ತಾವು ಬ್ಯಾಂಕ್ ಅಧಿಕಾರಿಗಳು, ವಿಮೆ ಏಜೆಂಟರು ಅಥವಾ ಕೆವೈಸಿ (KYC) ಪರಿಶೀಲನಾ ಏಜೆಂಟರು ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ನಿಮ್ಮ ಖಾತೆ ನಿಷ್ಕ್ರಿಯವಾಗಿದೆ ಎಂದು ಹೇಳಿ ನಿಮ್ಮ ವೈಯಕ್ತಿಕ ವಿವರಗಳನ್ನು (ಉದಾ: ಹೆಸರು, ಹುಟ್ಟಿದ ದಿನಾಂಕ) ಕೇಳಿ ನಂಬಿಕೆ ಗಳಿಸುತ್ತಾರೆ.
ಇದೇ ವೇಳೆ, ಕರೆ ಮಾಡಿದ ವ್ಯಕ್ತಿಯು ಇನ್ನೊಬ್ಬನಿಗೆ ಕರೆ ಮಾಡಿ, ನಿಮ್ಮ ಜತೆಗಿನ ಸಂವಾದವನ್ನು ಮರ್ಜ್ ಮಾಡುತ್ತಾನೆ. ಇದನ್ನು ಕಾನ್ಫರೆನ್ಸ್ ಕಾಲ್ ಎಂದೂ ಹೇಳಬಹುದು. ಕರೆ ಮಾಡಿದ ಮೊದಲ ವಂಚಕನು, ಎರಡನೇ ವಂಚಕನಿಗೆ “ಈ ಗ್ರಾಹಕರಿಗೆ ತಕ್ಷಣದ ಸಹಾಯ ಬೇಕಿದೆ, ಅವರ ಖಾತೆಯನ್ನು ಸರಿಪಡಿಸಲು ದಯವಿಟ್ಟು ಒಟಿಪಿ ಕಳುಹಿಸಿ” ಎಂದು ಮನವಿ ಮಾಡುತ್ತಾನೆ.
ಆಗ ಗ್ರಾಹಕರ ಮೊಬೈಲ್ ಗೆ ಒಟಿಪಿ ಬರುತ್ತದೆ. ಎಲ್ಲಿ ಖಾತೆ ನಿಷ್ಕ್ರಿಯವಾಗಿದೆಯೋ ಎಂದು ಆತಂಕಕ್ಕೊಳಗಾದ ಗ್ರಾಹಕರು ಒಟಿಪಿ ಹೇಳುತ್ತಾರೆ. ಇದಾದ ಬಳಿಕ ಇಬ್ಬರೂ ವಂಚಕರು ಸೇರಿ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ.
ವಂಚಕರು ತಮಗೆ ಪರಿಚಯವಿರುವ ಬ್ಯಾಂಕ್ ನ ಗ್ರಾಹಕ ಸೇವಾ ಪ್ರತಿನಿಧಿಗಳಂತೆ ಮಾತನಾಡಿ, ಮಧ್ಯಪ್ರವೇಶ ಮಾಡುವಂತೆ ನಟಿಸುವುದರಿಂದ ಗ್ರಾಹಕರು ಸುಲಭವಾಗಿ ನಂಬುತ್ತಾರೆ. ಆದರೆ, ಇನ್ನು ಮುಂದೆ ಗ್ರಾಹಕರು ಯಾವುದೇ ಕಾರಣಕ್ಕೂ ಮೊಬೈಲ್ ಗೆ ಕರೆ ಮಾಡುವವರನ್ನು ನಂಬಬಾರದು. ಕಾಲ್ ಮರ್ಜ್ ಮಾಡುತ್ತೇವೆ ಎಂದರೆ ಕಟ್ ಮಾಡಬೇಕು. ಯಾವುದೇ ಕಾರಣಕ್ಕೂ ಒಟಿಪಿ ಹೇಳಬಾರದು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮೂರು ಸಂಕೀರ್ಣ ಮೂಳೆ ಶಸ್ತ್ರಚಿಕಿತ್ಸೆಗಳು ಯಶಸ್ವಿ : ಆಧುನಿಕ ತಂತ್ರಜ್ಞಾನದಿಂದ ರೋಗಿಗಳಿಗೆ ಹೊಸ ಬದುಕು



















