ನವದೆಹಲಿ : ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡದ ಆಟಗಾರ್ತಿಯರು ಗುರುವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಎಲ್ಲ ಆಟಗಾರ್ತಿಯರ ಸಹಿಯನ್ನು ಒಳಗೊಂಡ ತಂಡದ ನೀಲಿ ಜೆರ್ಸಿಯನ್ನೂ ಮುರ್ಮು ಅವರಿಗೆ ಉಡುಗೊರೆ ನೀಡಲಾಗಿದೆ.
ಇನ್ನು ಈ ವೇಳೆ ರಾಷ್ಟ್ರಪತಿ ಅವರ ಜತೆಗೆ ಎಲ್ಲ 16 ಆಟಗಾರ್ತಿಯರು ಮತ್ತು ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಟ್ರೋಫಿಯೊಂದಿಗೆ ಪೋಸ್ ನೀಡಿದರು. ಮುರ್ಮು ತಂಡದ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದರು ಮತ್ತು ಯುವಜನರನ್ನು ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸಿದರು. ಬುಧವಾರ ಪ್ರಧಾನಿ ನರೇಂದ್ರ ಮೊದಿ ಅವರನ್ನು ಲೋಕಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಮಹಿಳಾ ತಂಡ ಭೇಟಿ ಮಾಡಿತ್ತು.
“ಮಹಿಳಾ ತಂಡ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ತಂಡವು ಭಾರತವನ್ನು ಪ್ರತಿಬಿಂಬಿಸುತ್ತದೆ. ವಿಭಿನ್ನ ಪ್ರದೇಶಗಳು, ವಿಭಿನ್ನ ಸಾಮಾಜಿಕ ಹಿನ್ನೆಲೆಗಳು, ವಿಭಿನ್ನ ಸನ್ನಿವೇಶಗಳನ್ನು ಪ್ರತಿನಿಧಿಸುತ್ತಾರೆ ಆದರೆ ಅವರು ಒಂದೇ ತಂಡ ಭಾರತ” ಎಂದು ಮುರ್ಮು ಎಕ್ಸ್‌ನಲ್ಲಿ ಬರೆದಿದ್ದಾರೆ.
ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಮಹಾರಾಷ್ಟ್ರದ 8 ಮಂದಿಯನ್ನು ಮುಖ್ಯಮಂತ್ರಿ ದೇವೇಂದ್ರ ಡ್ನಾವಿಸ್ ನವೆಂಬರ್ 7ರಂದು ಮುಂಬೈನಲ್ಲಿ ಸನ್ಮಾನಿಸಲಿದ್ದಾರೆ. ಉಪನಾಯಕಿ ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್ ಮತ್ತು ಸ್ಪಿನ್ನರ್ ರಾಧಾ ಯಾದವ್ ತಂಡದಲ್ಲಿದ್ದ ಮೂವರು ಮಹಾರಾಷ್ಟ್ರ ಆಟಗಾರ್ತಿಯರಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈ ಮೂವರಿಗೆ ತಲಾ 2.25 ಕೋಟಿ ರೂ. ನೀಡಿ ಸನ್ಮಾನಿಸಲಿದೆ. ತಂಡದ ಕೋಚ್ ಅಮೋಲ್ ಮುಜುಮ್ದಾರ್ ಕೂಡ ಮಹಾರಾಷ್ಟ್ರದವರಾಗಿದ್ದು, 22.5 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.
ಕಳೆದ ಭಾನುವಾರ ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ 52 ರನ್ ಭರ್ಜರಿ ಗೆಲುವು ಸಾಧಿಸಿತ್ತು. 3 ಬಾರಿ ಏಕದಿನ ವಿಶ್ವಕಪ್ ಫೈನಲ್‌ಗೇರಿದ್ದ ಭಾರತ ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಚೊಚ್ಚಲ ಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು.
ಇದನ್ನೂ ಓದಿ : ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ; ರಸ್ತೆ ತಡೆದು ರೈತರ ತೀವ್ರ ಪ್ರತಿಭಟನೆ



















