ಉಡುಪಿ : ಸುಮಾರು 20 ಅಡಿ ಆಳದ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿರುವ ಚೀಲವನ್ನು ಮೇಲಕ್ಕೆತ್ತಿ, ವಾರಸುದಾರರಿಗೆ ನೀಡುವ ಮೂಲಕ ಈಶ್ವರ್ ಮಲ್ಪೆ ಮತ್ತು ತಂಡ ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕ್ಕಮಗಳೂರು ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು. ಅದರಲ್ಲಿದ್ದ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ, ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿನಲ್ಲಿ ಬಿದ್ದಿದ್ದು, ಕೂಡಲೇ ಉಡುಪಿಯ ಈಶ್ವರ್ ಮಲ್ಪೆಗೆ ಕರೆ ಮಾಡಿ ತಿಳಿಸಲಾಯಿತು.

ಕೂಡಲೇ ಅಲ್ಲಿಗೆ ಆಗಮಿಸಿದ ಈಶ್ವರ್ ಮಲ್ಪೆ ಅವರ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. “ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ ಹೂತು ಹೋಗಿತ್ತು, ಎಲ್ಲೆಡೆ ಕತ್ತಲೆ, ಕಣ್ಣಿಗೆ ಏನೂ ತೋರುತ್ತಿರಲಿಲ್ಲ. ಸುಮಾರು 20 ಅಡಿಗಳಷ್ಟು ಆಳಕ್ಕೆ ಹೋಗಿ ಜಾಲಾಡಿದಾಗ ಕೈಗೆ ಸಿಕ್ಕಿತು. ದೇವರ ಅನುಗ್ರಹ ಹಾಗೂ ಜನರ ಆಶೀರ್ವಾದದಿಂದ ಚಿನ್ನ ಮತ್ತೆ ಸಿಕ್ಕಿದೆ” ಈಶ್ವರ್ ಮಲ್ಪೆ ತಿಳಿಸಿದ್ದಾರೆ.
ಇದನ್ನೂ ಓದಿ : ಸುಳ್ಳು ಕಂಪ್ಲೇಟ್ ಕೊಟ್ಟರೆ ಜೈಲಿಗೆ ಹಾಕಿಸುತ್ತೇನೆ : ಉಪಲೋಕಾಯುಕ್ತ ಎಚ್ಚರಿಕೆ



















