ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೊಡುವ ಸೌಲಭ್ಯಗಳಲ್ಲಿ ಗ್ರಾಚ್ಯುಟಿ ಕೂಡ ಒಂದಾಗಿದೆ. ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಕಂಪನಿಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿದ್ದ ಪಕ್ಷದಲ್ಲಿ ಕಡ್ಡಾಯವಾಗಿ ನೀಡಲೇಬೇಕಾದ ಸೌಲಭ್ಯ ಇದಾಗಿದೆ. ಪೇಮೆಂಟ್ ಆಫ್ ಗ್ರಾಚ್ಯುಟಿ ಆ್ಯಕ್ಟ್ 1972ರ ಪ್ರಕಾರ ನೀಡಲೇಬೇಕಾದ ಬೆನಿಫಿಟ್ ಇದಾಗಿದೆ. ಇನ್ನು, ಕೇಂದ್ರ ಸರ್ಕಾರವು ಗ್ರಾಚ್ಯುಟಿ ಮಿತಿಯನ್ನು 25 ಲಕ್ಷ ರೂ.ಗೆ ಏರಿಕೆ ಮಾಡಿದೆ. ಆದರೆ, ಇದು ಕೆಲವೇ ಕೆಲವು ವಲಯಗಳಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಅನ್ವಯ ಎಂದು ಸ್ಪಷ್ಟಪಡಿಸಿದೆ.
ಹೌದು, ಕೇಂದ್ರ ಸರ್ಕಾರದ ಸಿವಿಲ್ ಸರ್ವಂಟ್ ಗಳಿಗೆ ಮಾತ್ರ ಗ್ರಾಚ್ಯುಟಿ ಮಿತಿಯ ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಪ್ರತಿಯೊಬ್ಬ ನೌಕರರಿಗೂ ಗ್ರಾಚ್ಯುಟಿ ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೊಸ ಸ್ಪಷ್ಟನೆ ನೀಡಲಾಗಿದೆ.
ಹಾಗಾಗಿ, ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಬ್ಯಾಂಕ್ ನೌಕರರು, ಬಂದರು ನೌಕರರು, ಆರ್ ಬಿ ಐ ಉದ್ಯೋಗಿಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮೊತ್ತವು ಮೊದಲಿನಷ್ಟೇ ಇರಲಿದೆ. ಸಿವಿಲ್ ಸರ್ವೆಂಟ್ ನೌಕರರು ಹೊರತುಪಡಿಸಿ ಯಾರಿಗೂ ಹೊಸ ನಿಯಮಗಳು ಅನ್ವಯವಾಗುವುದಿಲ್ಲ.
ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ?
ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ಹಲವು ವಿಧಾನಗಳಲ್ಲಿ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಈಗ ಒಬ್ಬ ಉದ್ಯೋಗಿ ಗ್ರಾಚ್ಯುಟಿ ಪೇಮೆಂಟ್ ಕಾಯ್ದೆ 1972ಗೆ ಒಳಪಟ್ಟಿದ್ದರೆ, ವರ್ಷದಲ್ಲಿ 15 ದಿನಗಳ ಸಂಬಳದ ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳ ಜತೆ ಗುಣಿಸಿ ಲೆಕ್ಕ ಹಾಕಲಾಗುತ್ತದೆ. ಸಂಬಳದ ಲೆಕ್ಕದಲ್ಲಿ ಮೂಲ ಸಂಬಳ, ಕೊನೆ ಬಾರಿ ಪಡೆದ ತುಟ್ಟಿಭತ್ಯೆ (DA) ಎಲ್ಲವೂ ಸೇರಿಸಲಾಗುತ್ತದೆ. ನಂತರ ಮೊತ್ತವನ್ನು 26ರಿಂದ ಭಾಗಿಸಬೇಕಾಗುತ್ತದೆ. ಭಾಗಿಸಿದಾಗ ಲಭಿಸುವ ಮೊತ್ತವನ್ನು ಗ್ರಾಚ್ಯುಟಿ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ 1,426 ಹುದ್ದೆಗಳ ನೇಮಕಾತಿ: ಕರ್ನಾಟಕದಲ್ಲೂ ಇವೆ ಹುದ್ದೆಗಳು



















