ನವದೆಹಲಿ: ಕಳೆದೊಂದು ತಿಂಗಳಿನಿಂದ ತನ್ನನ್ನು ಹಿಂಬಾಲಿಸುತ್ತಿದ್ದ ಯುವಕ ಮತ್ತು ಆತನ ಇಬ್ಬರು ಸಹಚರರು ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ 20 ವರ್ಷದ ಯುವತಿಯೊಬ್ಬಳು 2 ದಿನಗಳ ಹಿಂದೆ ನೀಡಿದ್ದ ದೂರು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, 24 ಗಂಟೆಗಳಲ್ಲಿ ಪ್ರಕರಣ ಸಂಪೂರ್ಣ ತಿರುವು ಪಡೆದುಕೊಂಡಿದ್ದು, ಇದು ಆ್ಯಸಿಡ್ ದಾಳಿಯಲ್ಲ, ಬದಲಾಗಿ ಮೂವರನ್ನು ಸಿಲುಕಿಸಲು ಹೆಣೆದ ಸುಳ್ಳು ಕಥೆ ಎಂಬುದು ಬಯಲಾಗಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಯುವತಿಯ ತಂದೆ ಅಖೀಲ್ ಖಾನ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೂವರ ಮೇಲೆ ಸೇಡು ತೀರಿಸಿಕೊಳ್ಳಲು ಆ್ಯಸಿಡ್ ದಾಳಿಯ ಕಥೆ ಕಟ್ಟಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ಟಾಯ್ಲೆಟ್ ಕ್ಲೀನರ್ ಸುರಿದು ನಾಟಕ
ಆರೋಪಿಗಳಲ್ಲಿ ಒಬ್ಬನ ಪತ್ನಿ ನೀಡಿದ್ದ ಕಿರುಕುಳ ದೂರಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಅಖೀಲ್ ಖಾನ್ ಈ ಸಂಚು ರೂಪಿಸಿದ್ದ. ಆತನ ಸೂಚನೆಯಂತೆಯೇ ಮಗಳು ಸುಳ್ಳು ಹೇಳಿದ್ದಳು. ಯುವತಿಯ ಕೈ ಮೇಲಾಗಿದ್ದ ಸುಟ್ಟ ಗಾಯಗಳು ಆ್ಯಸಿಡ್‌ನಿಂದಲ್ಲ, ಬದಲಾಗಿ ಟಾಯ್ಲೆಟ್ ಕ್ಲೀನರ್‌ನಿಂದ ಆಗಿವೆ ಎಂದು ಖಾನ್ ಬಾಯ್ಬಿಟ್ಟಿದ್ದಾನೆ. ಮನೆಯಿಂದ ತಂದಿದ್ದ ಟಾಯ್ಲೆಟ್ ಕ್ಲೀನರ್ ಅನ್ನು ಮಗಳೇ ತನ್ನ ಕೈ ಮೇಲೆ ಸುರಿದುಕೊಂಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಸುಳ್ಳು ಕಥೆ ಕಟ್ಟಿದ ಆರೋಪದ ಮೇಲೆ ಯುವತಿ ಮತ್ತು ಆಕೆಯ ತಂದೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ದೆಹಲಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ವಿದ್ಯಾರ್ಥಿನಿ ಹೇಳಿದ್ದೇನು?
ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ನನ್ನ ಮೇಲೆ, ಜಿತೇಂದ್ರ ಎಂಬಾತ ಮತ್ತು ಆತನ ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಎಂಬವರು ಲಕ್ಷ್ಮೀಬಾಯಿ ಕಾಲೇಜಿನ ಬಳಿ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ದೂರು ನೀಡಿದ್ದಳು. ಜಿತೇಂದ್ರ ಬೈಕ್ ಚಲಾಯಿಸುತ್ತಿದ್ದಾಗ, ಹಿಂಬದಿ ಸವಾರ ಇಶಾನ್, ಅರ್ಮಾನ್‌ಗೆ ಬಾಟಲಿ ನೀಡಿದ್ದು, ಆತ ನನ್ನ ಮೇಲೆ ಆ್ಯಸಿಡ್ ರೀತಿಯ ದ್ರವ ಎಸೆದಿದ್ದಾಗಿ ಹೇಳಿದ್ದಳು. ಮುಖವನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ಎರಡೂ ಕೈಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಳು.
ತನಿಖೆಯಿಂದ ಬಯಲಾದ ಸತ್ಯ
ಆದರೆ, ಪೊಲೀಸ್ ತನಿಖೆಯ ವೇಳೆ ಯುವತಿಯ ಹೇಳಿಕೆಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ. ಘಟನೆ ನಡೆದ ಸಮಯದಲ್ಲಿ ಪ್ರಮುಖ ಆರೋಪಿ ಜಿತೇಂದ್ರ ಕರೋಲ್ ಬಾಗ್‌ನಲ್ಲಿದ್ದ ಎಂಬುದು ಆತನ ಮೊಬೈಲ್ ಲೊಕೇಶನ್, ಸಿಸಿಟಿವಿ ದೃಶ್ಯಾವಳಿ ಮತ್ತು ಸಾಕ್ಷಿಗಳ ಹೇಳಿಕೆಯಿಂದ ದೃಢಪಟ್ಟಿದೆ. ಯುವತಿ ಹೇಳಿದ್ದ ಬೈಕ್ ಕೂಡ ಕರೋಲ್ ಬಾಗ್‌ನಲ್ಲಿಯೇ ಪತ್ತೆಯಾಗಿದೆ. ಘಟನಾ ಸ್ಥಳದ ಬಳಿ ಯಾವುದೇ ಆ್ಯಸಿಡ್ ಕುರುಹುಗಳು ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲದೆ, ಯುವತಿ ಮತ್ತು ಆಕೆಯ ಸಹೋದರ ಮನೆಯಿಂದ ಸ್ಕೂಟರ್‌ನಲ್ಲಿ ಹೊರಟಿದ್ದು, ಕಾಲೇಜಿನ ಮುಖ್ಯ ಗೇಟ್ ಬಳಿ ಬಿಡದೆ, 200 ಮೀಟರ್ ದೂರದಲ್ಲಿರುವ ಅಶೋಕ್ ವಿಹಾರ್ ಪ್ರದೇಶದಲ್ಲಿ ಇಳಿಸಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ.
ಆರೋಪಿಯ ಪತ್ನಿಯಿಂದಲೇ ದೂರು
ಆ್ಯಸಿಡ್ ದಾಳಿ ನಡೆದಿದೆ ಎನ್ನಲಾದ ಎರಡು ದಿನಗಳ ಮೊದಲು, ಅಖೀಲ್ ಖಾನ್ ತನಗೆ ಕಿರುಕುಳ ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಜಿತೇಂದ್ರನ ಪತ್ನಿ ಪಿಸಿಆರ್ ಕರೆ ಮಾಡಿದ್ದಳು. 2021 ರಿಂದ 2024 ರವರೆಗೆ ಖಾನ್‌ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಆತ ತನ್ನ ಮೇಲೆ ದೌರ್ಜನ್ಯ ಎಸಗಿ, ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆಕೆ ಆರೋಪಿಸಿದ್ದಳು. ಈ ಸಿಟ್ಟಿನಿಂದ ಜಿತೇಂದ್ರನ ಮೇಲೆ ಆ್ಯಸಿಡ್ ದಾಳಿಯ ಆರೋಪ ಹೊರಿಸಲು ಸಂಚು ರೂಪಿಸಿದ್ದ ಅಖೀಲ್ ಖಾನ್, ತನ್ನ ಮಗಳ ಜತೆ ಸೇರಿ ಈ ಕಥೆ ಕಟ್ಟಿದ್ದ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಬಾಂಗ್ಲಾ ಗಡಿಯಲ್ಲಿ ಹಫೀಜ್ ಸಯೀದ್ ಆಪ್ತ: ಭಾರತದ ಭದ್ರತೆಗೆ ಹೆಚ್ಚಿದ ಆತಂಕ, ಈಶಾನ್ಯ ರಾಜ್ಯಗಳ ಅಸ್ಥಿರತೆಗೆ ಸಂಚು?



















