ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವೆಂದು ತೋರಿಸುವ ವಿವಾದಾತ್ಮಕ ನಕ್ಷೆಯೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಮತ್ತೆ ಉದ್ಧಟತನ ಮೆರೆದಿದ್ದು, ಹೊಸ ರಾಜತಾಂತ್ರಿಕ ವಿವಾದಕ್ಕೆ ಕಾರಣರಾಗಿದ್ದಾರೆ.
ಢಾಕಾಗೆ ಭೇಟಿ ನೀಡಿದ್ದ ಪಾಕಿಸ್ತಾನದ ಜಂಟಿ ಸೇನಾ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರನ್ನು ಭೇಟಿಯಾದ ಯೂನುಸ್, ‘ಆರ್ಟ್ ಆಫ್ ಟ್ರಯಂಫ್’ (Art of Triumph) ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಪುಸ್ತಕದ ಮುಖಪುಟದಲ್ಲಿ ಭಾರತದ ಅಸ್ಸಾಂ ಸೇರಿದಂತೆ ಏಳು ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭೂಪ್ರದೇಶದ ಭಾಗವೆಂದು ತೋರಿಸುವ ತಿರುಚಿದ ನಕ್ಷೆ ಇದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಸುಧಾರಿಸುತ್ತಿರುವ ಸಮಯದಲ್ಲೇ ಈ ಘಟನೆ ನಡೆದಿದೆ. 1971ರ ವಿಮೋಚನಾ ಯುದ್ಧದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಶೇಖ್ ಹಸೀನಾ ಸರ್ಕಾರದ ಪತನದ ನಂತರ ಯೂನುಸ್ ಅಧಿಕಾರ ವಹಿಸಿಕೊಂಡಾಗಿನಿಂದ ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಬಾಂಗ್ಲಾ ಸಂಬಂಧ ವೃದ್ಧಿಸಿಕೊಳ್ಳುತ್ತಿದೆ.
ಇದೇ ಮೊದಲಲ್ಲ ಈ ವಿವಾದ
ಯೂನುಸ್ ಅವರು ಭಾರತದ ಈಶಾನ್ಯ ರಾಜ್ಯಗಳ ಕುರಿತು ಅಧಿಕಪ್ರಸಂಗಿತನ ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚೀನಾಕ್ಕೆ ಭೇಟಿ ನೀಡಿದ್ದಾಗ, ಭಾರತದ ಈಶಾನ್ಯ ರಾಜ್ಯಗಳನ್ನು ‘ಭೂ ಆವೃತ’ (landlocked) ಎಂದು ಕರೆದು, ಈ ಪ್ರದೇಶಕ್ಕೆ ‘ಸಮುದ್ರದ ಏಕೈಕ ರಕ್ಷಕ’ ಬಾಂಗ್ಲಾದೇಶ ಎಂದು ಹೇಳಿದ್ದರು. ಯೂನುಸ್ ಅವರ ಈ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈಶಾನ್ಯದ ವ್ಯೂಹಾತ್ಮಕ ಮಹತ್ವವನ್ನು ಪುನರುಚ್ಚರಿಸಿದ್ದಲ್ಲದೆ, ಬಾಂಗ್ಲಾ ಸರಕುಗಳನ್ನು ಭಾರತದ ಮೂಲಕ ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ಗೆ ಸಾಗಿಸಲು ಅನುಮತಿಸುವ ಸಾರಿಗೆ ಒಪ್ಪಂದವನ್ನು ಭಾರತ ರದ್ದುಗೊಳಿಸಿತ್ತು.
ಯೂನುಸ್ ಅವರ ಆಪ್ತರಾದ ಮೇಜರ್ ಜನರಲ್ (ನಿವೃತ್ತ) ಫಜ್ಲರ್ ರಹಮಾನ್ ಮತ್ತು ನಹೀದುಲ್ ಇಸ್ಲಾಂ ಅವರೂ ಸಹ ‘ಬೃಹತ್ ಬಾಂಗ್ಲಾದೇಶ’ ಪರಿಕಲ್ಪನೆಯನ್ನು ಮುಂದಿಟ್ಟು ವಿವಾದ ಸೃಷ್ಟಿಸಿದ್ದರು.
ಈಗ ನಡೆದಿರುವ ನಕ್ಷೆ ವಿವಾದದ ಕುರಿತು ಭಾರತದ ವಿದೇಶಾಂಗ ಇಲಾಖೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



















