ಇಸ್ಲಾಮಾಬಾದ್: ಅಫ್ಘಾನಿಸ್ತಾನದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಭಾರತದ ವಿರುದ್ಧ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಫ್ಘಾನಿಸ್ತಾನದ ಎದುರು ನೇರಾನೇರ ಯುದ್ಧಕ್ಕೆ ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿರುವ ಅವರು, ಇದೇ ಸಂದರ್ಭದಲ್ಲಿ “ಭಾರತವು ಗಡಿಯಲ್ಲಿ ‘ಕೀಳುಮಟ್ಟದ ಆಟ’ (ಡರ್ಟಿ ಗೇಮ್) ಆಡಬಹುದು” ಎಂದು ಎಚ್ಚರಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ.
ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಭಾರತ ಪ್ರಚೋದನೆ ಸೃಷ್ಟಿಸುವ ಸಾಧ್ಯತೆಯ ಕುರಿತ ಪ್ರಶ್ನೆಗೆ, “ಖಂಡಿತವಾಗಿಯೂ, ಆ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಂತಹ ಬಲವಾದ ಸಾಧ್ಯತೆಗಳಿವೆ” ಎಂದು ಉತ್ತರಿಸಿದ್ದಾರೆ.
“ಒಂದು ವೇಳೆ ಎರಡು ರಂಗಗಳ ಯುದ್ಧ ಆರಂಭವಾದರೆ, ಅದನ್ನು ಎದುರಿಸಲು ಪ್ರಧಾನಿ ಜೊತೆ ಯಾವುದೇ ಸಭೆ ನಡೆಸಿದ್ದೀರಾ?” ಎಂದು ನಿರೂಪಕರು ಕೇಳಿದ ಪ್ರಶ್ನೆಗೆ, “ಹೌದು, ನಮ್ಮಲ್ಲಿ ಕಾರ್ಯತಂತ್ರಗಳು ಸಿದ್ಧವಾಗಿವೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದರೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ” ಎಂದು ಆಸಿಫ್ ಹೇಳಿದ್ದಾರೆ.
“ಹಿಂದೆಯೂ ಭಾರತದ ವಿರುದ್ಧ ಆರೋಪ”
ಇತ್ತೀಚೆಗೆ ಜಿಯೋ ನ್ಯೂಸ್‌ಗೆ ನೀಡಿದ್ದ ಹೇಳಿಕೆಯಲ್ಲೂ ಆಸಿಫ್, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಭಾರತದ ಪರವಾಗಿ “ಪರೋಕ್ಷ ಯುದ್ಧ” ನಡೆಸುತ್ತಿದೆ ಎಂದು ಆರೋಪಿಸಿದ್ದರು. “ಅಫ್ಘಾನ್ ತಾಲಿಬಾನ್ ಸರ್ಕಾರದ ನಿರ್ಧಾರಗಳನ್ನು ದೆಹಲಿಯೇ ಪ್ರಾಯೋಜಿಸುತ್ತಿದೆ. ಸದ್ಯ ಕಾಬೂಲ್, ದೆಹಲಿ ಪರವಾಗಿ ಪರೋಕ್ಷ ಯುದ್ಧ ನಡೆಸುತ್ತಿದೆ” ಎಂದು ಅವರು ದೂರಿದ್ದರು. ತನ್ನ ನೆಲದಲ್ಲೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಇತಿಹಾಸ ಹೊಂದಿರುವ ಪಾಕಿಸ್ತಾನ, ಇದೀಗ ಅಫ್ಘಾನಿಸ್ತಾನದ ಮೇಲೆ ಆರೋಪ ಮಾಡುತ್ತಿರುವುದು ಗಮನಾರ್ಹವಾಗಿದೆ.
“ಪಾಕ್-ಅಫ್ಘಾನ್ ಗಡಿ ಸಂಘರ್ಷ”
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷದಲ್ಲಿ ಹಲವು ಸೈನಿಕರು ಮತ್ತು ನಾಗರಿಕರು ಮೃತಪಟ್ಟ ನಂತರ, ಬುಧವಾರವಷ್ಟೇ ಎರಡೂ ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಪಾಕ್ ರಕ್ಷಣಾ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ನೇತೃತ್ವದ ಭಯೋತ್ಪಾದಕ ಗುಂಪುಗಳಿಗೆ ಅಫ್ಘಾನಿಸ್ತಾನ ಆಶ್ರಯ ನೀಡಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ. ಆದರೆ, ಈ ಆರೋಪವನ್ನು ಕಾಬೂಲ್ ಸರ್ಕಾರ ನಿರಾಕರಿಸುತ್ತಾ ಬಂದಿದೆ.