ಬೆಂಗಳೂರು: ಮಗಳು ಜನಿಸಿದ ಕೂಡಲೇ ಪೋಷಕರು ಆಕೆ ಹೆಸರಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಲು ಬಯಸುತ್ತಾರೆ. ಮಗಳ ಉನ್ನತ ಶಿಕ್ಷಣ, ಮದುವೆ ಸೇರಿ ಹಲವು ಸಂದರ್ಭಗಳಿಗೆ ಅನುಕೂಲವಾಗಲಿ ಎಂದು ಬಯಸುತ್ತಾರೆ. ಆದರೆ, ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ತುಂಬ ಜನರಿಗೆ ಗೊತ್ತಿರುವುದಿಲ್ಲ. ಇದಕ್ಕಾಗಿಯೇ, ಕೇಂದ್ರ ಸರ್ಕಾರದ ಬೆಂಬಲವಿರುವ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಇದೆ. ಈ ಯೋಜನೆಯಲ್ಲಿ ಪೋಷಕರು ಮಗಳ ಹೆಸರಲ್ಲಿ ತಿಂಗಳಿಗೆ ಕೇವಲ 2 ಸಾವಿರ ರೂ. ಹೂಡಿಕೆ ಮಾಡಿದರೆ ಸಾಕು, ಮಗಳು 21ನೇ ವಯಸ್ಸಿಗೆ ಬರುವಷ್ಟರಲ್ಲಿ ದೊಡ್ಡ ಮೊತ್ತವೇ ಆಗಿರುತ್ತದೆ.
ಹೌದು, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳು 2,000 ರೂ. ಹೂಡಿಕೆ ಮಾಡಿದರೆ, ವರ್ಷಕ್ಕೆ 24 ಸಾವಿರ ರೂ. ಆಗುತ್ತದೆ. ಇದೇಮೊತ್ತವನ್ನು 15 ವರ್ಷಗಳವರೆಗೆ ಹೂಡಿಕೆ ಮಾಡುವುದರಿಂದ ಒಟ್ಟು 3.60 ಲಕ್ಷ ಹೂಡಿಕೆಯಾಗುತ್ತದೆ. ಇದಕ್ಕೆ 8.2% ಬಡ್ಡಿದರದಲ್ಲಿ ಲಭಿಸಿದರೆ, 21 ವರ್ಷಗಳ ನಂತರ 11.08 ಲಕ್ಷ ರೂಪಾಯಿ ಆಗುತ್ತದೆ. ಆಗ ಮಗಳ ಉನ್ನತ ಶಿಕ್ಷಣಕ್ಕೆ ದೊಡ್ಡ ಮೊತ್ತ ಪೋಷಕರ ಕೈಯಲ್ಲಿ ಇರುತ್ತದೆ.
ಹಾಗಂತ, ನೀವು 21 ವರ್ಷದವರೆಗೂ ಹೂಡಿಕೆ ಮಾಡಬೇಕಾಗಿಲ್ಲ. ನೀವು 15 ವರ್ಷಗಳವರೆಗೆ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಾಕು. 16 ರಿಂದ 21 ನೇ ವರ್ಷದವರೆಗೆ ಯಾವುದೇ ಹೊಸ ಠೇವಣಿಗಳ ಅಗತ್ಯವಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಹಿಂದೆ ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿ ಸಂಗ್ರಹವಾಗುತ್ತಲೇ ಇರುತ್ತದೆ. ಇದರಿಂದಾಗಿ 21 ವರ್ಷಗಳ ಬಳಿಕ ನಿಮಗೆ 11.08 ಲಕ್ಷ ರೂ. ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆದ 21 ವರ್ಷಗಳ ನಂತರವೇ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದರೆ ಮಗಳಿಗೆ 18 ವರ್ಷ ತುಂಬಿದಾಗ ಅವಳ ಶಿಕ್ಷಣಕ್ಕೆ ಹಣದ ಅಗತ್ಯವಿದ್ದರೆ, ಆಗ ನೀವು ಹೂಡಿಕೆ ಮಾಡಿದ ಮೊತ್ತದ ಶೇ.50ರಷ್ಟು ಹಣವನ್ನು ವಿತ್ ಡ್ರಾ ಮಾಡಬಹುದು.