ಹಾಸನ : ವರ್ಷಕ್ಕೊಂದು ಬಾರಿ ದರ್ಶನ ನೀಡುವ ಹಾಸನದ ಪುರಾಣ ಪ್ರಸಿದ್ದ ಹಾಸನಾಂಬೆಯ ದರ್ಶನ ಶುಕ್ರವಾರದಿಂದ ಆರಂಭವಾಗಿದೆ. ಭಕ್ತರು ಸರತಿ ಸಾಲಿನಲ್ಲಿ ಬಂದು ಹಾಸನಾಂಬೆ ದೇವಿಯ ದರ್ಶನ ಪಡೆಯುತ್ತಿದ್ದಾರೆ. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹಾಸನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಭಕ್ತರಿಗೆ ವಿಶೇಷ ಮನವಿ ಮಾಡಿದ್ದಾರೆ.
ಈಗಾಗಲೇ ಶನಿವಾರ ಮುಂಜಾನೆ ಐದು ಗಂಟೆಯಿಂದ ಭಾನುವಾರ ಮುಂಜಾನೆ ಐದು ಗಂಟೆವರೆಗೆ 2.7 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಮಾಡಿದ್ದಾರೆ. ಯಾವುದೇ ಗೊಂದಲ ಇಲ್ಲದೆ ಎಲ್ಲರಿಗೂ ದರ್ಶನ ಆಗುತ್ತಿದೆ. ಮುಂದಿನ ಶುಕ್ರವಾರದ ಬಳಿಕ ಸಂಪೂರ್ಣ ರಷ್ ಆಗಲಿದೆ. ಹೀಗಾಗಿ ಸೋಮವಾರದಿಂದ ಗುರುವಾರದ ಒಳಗೇ ಎಲ್ಲರೂ ದರ್ಶನ ಮಾಡಿ ಎಂದು ಸಚಿವ ಕೃಷ್ಣಭೈರೇಗೌಡ ಭಕ್ತರಿಗೆ ಮನವಿ ಮಾಡಿದ್ದಾರೆ.
ಅಲ್ಲದೇ, ಎಲ್ಲಾ ವ್ಯವಸ್ಥೆ ಸುಗಮ ಸ್ವಚ್ಛವಾಗಿ ನಡೆದಿದೆ. ಬರುವ ಎಲ್ಲಾ ಭಕ್ತರಿಗು ಒಂದು ಗಂಟೆಯ ಆಜುಬಾಜಿನಲ್ಲಿ ದರ್ಶನ ಆಗುತ್ತಿದೆ. ಹಾಗಾಗಿ ಎಲ್ಲರೂ ಗುರುವಾರದ ಒಳಗೆ ದರ್ಶನ ಮಾಡಿ ಎಂದು ಭಕ್ತರಿಗೆ ವೀಡಿಯೋ ಹೇಳಿಕೆ ಮೂಲಕ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ.


















