ನವದೆಹಲಿ: ರಷ್ಯಾ ಸೇನೆಯ ಪರವಾಗಿ ಹೋರಾಡುತ್ತಿದ್ದ 22 ವರ್ಷದ ಭಾರತೀಯ ಯುವಕನೊಬ್ಬನನ್ನು ಉಕ್ರೇನ್ ಪಡೆಗಳು ಸೆರೆಹಿಡಿದಿವೆ ಎಂದು ವರದಿಯಾಗಿದೆ. ಗುಜರಾತ್‌ನ ಮೋರ್ಬಿ ನಿವಾಸಿ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾದ ಈ ಯುವಕನ ಬಂಧನದ ಕುರಿತು ಉಕ್ರೇನಿಯನ್ ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದು, ಭಾರತೀಯ ಅಧಿಕಾರಿಗಳು ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು, “ವರದಿಯ ಸತ್ಯಾಸತ್ಯತೆಯನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಈ ಸಂಬಂಧ ಉಕ್ರೇನ್ ಕಡೆಯಿಂದ ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ” ಎಂದು ತಿಳಿಸಿವೆ.
ಉಕ್ರೇನ್‌ನ 63ನೇ ಯಾಂತ್ರೀಕೃತ ಬ್ರಿಗೇಡ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹುಸೇನ್ ಕಾಣಿಸಿಕೊಂಡಿದ್ದು, ತಾನು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ರಷ್ಯಾಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ತನಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲು ಶಿಕ್ಷೆಯಿಂದ ಪಾರಾಗಲು ರಷ್ಯಾ ಸೇನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶ ನೀಡಲಾಯಿತು ಮತ್ತು ಅದನ್ನು ತಾನು ಒಪ್ಪಿಕೊಂಡೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ. “ನಾನು ಜೈಲಿನಲ್ಲಿ ಇರಲು ಇಷ್ಟಪಡದ ಕಾರಣ, ‘ವಿಶೇಷ ಸೇನಾ ಕಾರ್ಯಾಚರಣೆ’ಗೆ (ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ) ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ, ಅಲ್ಲಿಂದ ಹೊರಬರಲು ನಾನು ಬಯಸಿದ್ದೆ” ಎಂದು ಹುಸೇನ್ ಹೇಳಿದ್ದಾನೆ.
ತಾನು ರಷ್ಯಾ ಪಡೆಗಳಿಂದ 16 ದಿನಗಳ ತರಬೇತಿ ಪಡೆದಿದ್ದು, ಅಕ್ಟೋಬರ್ 1 ರಂದು ತನ್ನನ್ನು ಮೊದಲ ಯುದ್ಧ ಕಾರ್ಯಾಚರಣೆಗೆ ಕಳುಹಿಸಲಾಯಿತು ಎಂದು ಆತ ಹೇಳಿಕೊಂಡಿದ್ದಾನೆ. ಮೂರು ದಿನಗಳ ಕಾಲ ಹೋರಾಡಿದ ನಂತರ, ತನ್ನ ಕಮಾಂಡರ್‌ನೊಂದಿಗೆ ಉಂಟಾದ ಸಂಘರ್ಷದ ಬಳಿಕ, ತಾನು ಉಕ್ರೇನಿಯನ್ ಸೈನಿಕರಿಗೆ ಶರಣಾದೆ ಎಂದು ತಿಳಿಸಿದ್ದಾನೆ. “ನಾನು ಹೋರಾಡಲು ಬಯಸುವುದಿಲ್ಲ ಎಂದು ಹೇಳಿ ನನ್ನ ಬಂದೂಕನ್ನು ಕೆಳಗಿಟ್ಟೆ, ನನಗೆ ಸಹಾಯ ಬೇಕಿತ್ತು” ಎಂದು ಆತ ಹೇಳಿದ್ದಾನೆ. ರಷ್ಯಾ ಸೇನೆಗೆ ಸೇರಲು ತನಗೆ ಆರ್ಥಿಕ ಪರಿಹಾರದ ಭರವಸೆ ನೀಡಲಾಗಿತ್ತು, ಆದರೆ ಅದು ಸಿಗಲೇ ಇಲ್ಲ ಎಂದು ಆರೋಪಿಸಿರುವ ಹುಸೇನ್, “ನಾನು ರಷ್ಯಾಕ್ಕೆ ಹಿಂತಿರುಗಲು ಬಯಸುವುದಿಲ್ಲ. ಅಲ್ಲಿ ಸತ್ಯವಿಲ್ಲ, ಏನೂ ಇಲ್ಲ. ನಾನು ಇಲ್ಲೇ (ಉಕ್ರೇನ್‌ನಲ್ಲಿ) ಜೈಲಿಗೆ ಹೋಗಲು ಸಿದ್ಧ” ಎಂದು ಹೇಳಿದ್ದಾನೆ.
ಉದ್ಯೋಗದ ಆಮಿಷವೊಡ್ಡಿ ಭಾರತವೂ ಸೇರಿದಂತೆ ಇತರ ದೇಶಗಳ ಪ್ರಜೆಗಳನ್ನು ರಷ್ಯಾ ಸೇನೆಗೆ ನೇಮಿಸಿಕೊಳ್ಳುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಘಟನೆ ನಡೆದಿದೆ. ಜನವರಿಯಲ್ಲಿ, ರಷ್ಯಾಕ್ಕೆ ವಂಚನೆಗೊಳಗಾದ 126 ಭಾರತೀಯರಲ್ಲಿ 12 ಮಂದಿ ರಷ್ಯಾ ಸೇನೆಯ ಪರ ಹೋರಾಡಿ ಮೃತಪಟ್ಟಿದ್ದು, 16 ಮಂದಿ ‘ಕಣ್ಮರೆ’ಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಭಾರತ ಸರ್ಕಾರವು ಮಾಸ್ಕೋವನ್ನು ಒತ್ತಾಯಿಸಿದೆ.