ಚನ್ನೈ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅವರ ಕರೂರ್ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.
ಏತನ್ಮಧ್ಯೆ, ಕರೂರು ಪಟ್ಟಣ ಪೊಲೀಸರು ಟಿವಿಕೆ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಳಗನ್ ಸೇರಿದಂತೆ ಹಲವರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109,110,125ಬಿ, 223 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109 ಮತ್ತು 110 ಕ್ರಮವಾಗಿ ಕೊಲೆ ಯತ್ನ ಮತ್ತು ಅಪರಾಧಿಕ ನರಹತ್ಯೆಗೆ ಯತ್ನಿಸುವ ಪ್ರಕರಣಗಳಾಗಿವೆ. ಸೆಕ್ಷನ್ 125 ದುಡುಕಿನ ಅಥವಾ ನಿರ್ಲಕ್ಷ್ಯದ ವರ್ತನೆಯ ಮೂಲಕ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಉಲ್ಲೇಖಿಸುತ್ತದೆ. ಸೆಕ್ಷನ್ 223 ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶವನ್ನು ಪಾಲಿಸದಿದ್ದಕ್ಕೆ ಸಂಬಂಧಿಸಿದ್ದಾಗಿದೆ.
ಇದೇ ವೇಳೆ ಕಾಲ್ತುಳಿತಕ್ಕೆ ನಟ ವಿಜಯ್ ಅವರೇ ಕಾರಣ ಎಂದು ಆರೋಪಿಸಿರುವ ಡಿಎಂಕೆ ನಾಯಕರು ಕೂಡಲೇ ವಿಜಯ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
“ಟಿವಿಕೆ ಕಾರ್ಯಕ್ರಮದ ಆಯೋಜಕರು ಕೇವಲ 10000 ಜನರು ರ‍್ಯಾಲಿಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು, ಆದರೆ 50,000 ರಿಂದ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ತಮಿಳುನಾಡು ಪೊಲೀಸರು ವಿಧಿಸಿದ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಜೀವಗಳಿಗೆ ಅಪಾಯವನ್ನುಂಟುಮಾಡಲಾಗಿದೆ. ಕಳೆದು ಹೋದ ಪ್ರತಿಯೊಂದು ಜೀವಕ್ಕೂ ವಿಜಯ್ ಜವಾಬ್ದಾರರಾಗಿರುತ್ತಾರೆ, ಅವರನ್ನು ಕೂಡಲೇ ಬಂಧಿಸಬೇಕು” ಎಂದು ಡಿಎಂಕೆ ವಕ್ತಾರ ಐಟಿ ವಿಭಾಗದ ಕಾರ್ಯದರ್ಶಿ ಸೇಲಂ ಧರಣಿಧರನ್ ಟ್ವೀಟರ್ ವೀಡಿಯೊದಲ್ಲಿ ತಿಳಿಸಿದ್ದಾರೆ.