ನವದೆಹಲಿ: ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿರುವ ಪ್ರಸಿದ್ಧ ಆಶ್ರಮವೊಂದರಲ್ಲಿ ಭಾರೀ ಹಗರಣ ಬೆಳಕಿಗೆ ಬಂದಿದ್ದು, ಸಂಸ್ಥೆಯ ನಿರ್ದೇಶಕರಾಗಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ 17ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ವಿದ್ಯಾರ್ಥಿವೇತನದ ಮೇಲೆ ಸ್ನಾತಕೋತ್ತರ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರೇ ಸ್ವಾಮೀಜಿ ವಿರುದ್ಧ ಈ ಗಂಭೀರ ಆರೋಪ ಮಾಡಿದವರು. ಪೊಲೀಸರು 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅವರಲ್ಲಿ 17 ಮಂದಿ, ಆರೋಪಿ ಸ್ವಾಮಿ ಚೈತನ್ಯಾನಂದನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅಶ್ಲೀಲ ವಾಟ್ಸ್ಆಪ್ ಮತ್ತು ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸುವುದು, ಬಲವಂತವಾಗಿ ಸ್ಪರ್ಶಿಸುವುದು ಹಾಗೂ ಬ್ಲ್ಯಾಕ್‌ಮೇಲ್ ಮಾಡಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಸ್ಥೆಯ ಮೂವರು ಮಹಿಳಾ ಸಿಬ್ಬಂದಿ ಮತ್ತು ಆಡಳಿತಾಧಿಕಾರಿಗಳು ಸ್ವಾಮಿಯ ಬೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿದ್ದರು ಎಂದೂ ಸಂತ್ರಸ್ತೆಯರು ದೂರಿದ್ದಾರೆ.
ಮೂಲತಃ ಒಡಿಶಾದವರಾದ ಚೈತನ್ಯಾನಂದ ಸರಸ್ವತಿ, ಕಳೆದ 12 ವರ್ಷಗಳಿಂದ ನಿರ್ವಾಹಕ ಹಾಗೂ ಉಸ್ತುವಾರಿಯಾಗಿ ಈ ಆಶ್ರಮದಲ್ಲೇ ವಾಸವಾಗಿದ್ದರು. ಇವರ ವಿರುದ್ಧ ಕ್ರಿಮಿನಲ್ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. 2009ರಲ್ಲಿ ಡಿಫೆನ್ಸ್ ಕಾಲೋನಿಯಲ್ಲಿ ಇವರ ವಿರುದ್ಧ ವಂಚನೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ 2016ರಲ್ಲಿ ವಸಂತ್ ಕುಂಜ್‌ನಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು.
ಪ್ರಸ್ತುತ ಪ್ರಕರಣದಲ್ಲಿ, ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಹಾರ್ಡ್ ಡಿಸ್ಕ್‌ಗಳು ಹಾಗೂ ವಿಡಿಯೋ ರೆಕಾರ್ಡರ್ ಅನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆ ವೇಳೆ, ಸಂಸ್ಥೆಯ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದ್ದ, ಸ್ವಾಮಿ ಬಳಸುತ್ತಿದ್ದ ವೋಲ್ವೋ ಕಾರಿಗೆ ನಕಲಿ ವಿಶ್ವಸಂಸ್ಥೆಯ (UN) ನಂಬರ್ ಪ್ಲೇಟ್ ಅಳವಡಿಸಿರುವುದು ಪತ್ತೆಯಾಗಿದೆ. ಆರೋಪಿ ಆಗ್ರಾದಲ್ಲಿ ಕೊನೆಯದಾಗಿ ಪತ್ತೆಯಾಗಿದ್ದರೂ, ನಿರಂತರವಾಗಿ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಮತ್ತು ಮೊಬೈಲ್ ಫೋನ್ ಅನ್ನು ಅಷ್ಟಾಗಿ ಬಳಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆರೋಪಗಳು ಕೇಳಿಬಂದ ಬೆನ್ನಲ್ಲೇ, ಆಶ್ರಮದ ಆಡಳಿತವನ್ನು ನೋಡಿಕೊಳ್ಳುವ ಶ್ರೀ ಶೃಂಗೇರಿ ಮಠವು, ಚೈತನ್ಯಾನಂದ ಸ್ವಾಮೀಜಿಯ ಕೃತ್ಯಗಳು “ಅಕ್ರಮ ಮತ್ತು ಅನುಚಿತ” ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಅವರನ್ನು ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ, ಅವರೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ, ಸ್ವಾಮೀಜಿಯ ಅಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಠದ ವತಿಯಿಂದಲೂ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.