ಶಿವಮೊಗ್ಗ: ಬಿಜೆಪಿಯವರಿಗೆ ವಿರೋಧ ಮಾಡುವುದೇ ಕೆಲಸ ಅದಕ್ಕೆ ಅವರು ವಿರೋಧ ಪಕ್ಷದಲ್ಲಿ ಕುಳಿತಿರುವುದು. ಮೋದಿ ಸಮೀಕ್ಷೆ ಮಾಡುತ್ತಾರಲ್ಲ ಅದನ್ನು ವಿರೋಧ ಮಾಡುತ್ತಾರಾ? ನಾವು ಮಾಡುತ್ತಿರುವುದು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅವರ ಆರ್ಥಿಕ ಸ್ಥಿತಿಯನ್ನು ನೋಡೋದಕ್ಕೆ ಸಮೀಕ್ಷೆ ಮಾಡುತ್ತಿದ್ದೇವೆ ಅದಕ್ಕೆ ಅವರು ಜಾತಿ ಬಣ್ಣ ಹಾಕುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗರಪ್ಪ, ವಿಜಯೇಂದ್ರ ಜಾತಿ ವಿಷ ಬೀಜ ಬಿತ್ತುತ್ತಾರೆ ಎಂದು ಹೇಳುತ್ತಿದ್ದಾರೆ. ಮೊದಲು ಜಾತಿ ವಿಷ ಬೀಜ ಬಿತ್ತಿದ್ದು ಅವರ ತಂದೆ ಯಡಿಯೂರಪ್ಪ. ಜಾತಿ ಮೇಲೆ ರಾಜಕಾರಣ ಹಾಗೂ ಹಣದ ಮೇಲೆ ರಾಜಕಾರಣ ಮಾಡಿದ್ದು ಮೊದಲು ನಿಮ್ಮ ತಂದೆಯವರು ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಮೀಕ್ಷೆ ಸಾಮಾಜಿಕವಾಗಿ ನ್ಯಾಯ ತರುತ್ತದೆ ಎನ್ನುವ ವಿಶ್ವಾಸ ನನಗಿದೆ ನಾನು ಎಲ್ಲರಿಗೂ ಕೈಮುಗಿದು ಕೇಳಿಕೊಳ್ಳುತ್ತೇನೆ ಎಲ್ಲರೂ ಸಹಕಾರ ಮಾಡಿ ಕ್ರಿಶ್ಚಿಯನ್ ಎಂದು ಹಾಕಿದ್ದು ತೆಗೆದು ಹಾಕಲಾಗಿದೆ. ಇದು ನಾವು ಹಾಕಿದ್ದಲ್ಲ ಅದಕ್ಕೆ ಬೊಮ್ಮಾಯಿ ಅವರು ಸಹ ಸಹಿ ಹಾಕಿದ್ದರು ಅದು ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಟಿಪ್ಪು ಅಧಿಕಾರ ಅವಧಿಯನ್ನು ನಾಚಿಸುವಂತೆ ಸಿದ್ದರಾಮಯ್ಯ ಅವರು ಅಧಿಕಾರ ನಡೆಸುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಮಧು ಬಂಗಾರಪ್ಪ ಅವರ ಅಪ್ಪ ಟಿಪ್ಪು ಟೋಪಿ ಹಾಕಿಕೊಂಡು ಓಡಾಡಿದವರು. ಬಿಜೆಪಿ ಬಿಟ್ಟಾಗ ಟಿಪ್ಪುಗೆ ಜೈ ಎಂದು ಹೇಳಿ ಓಡಾಡಿಕೊಂಡು ಮತ್ತೆ ಭಿಕ್ಷೆ ಬೇಡಿ ಬಿಜೆಪಿ ಸೇರಿಕೊಂಡ್ರು ಅವರ ಹಿಂದೆ ಅವರ ಮಕ್ಕಳು ಎಲ್ಲರೂ ಬಿಜೆಪಿಗೆ ಹೋದವರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರು ಆಡಳಿತದಲ್ಲಿದ್ದಾಗ ಬಾಯಿ ಮುಚ್ಚಿಕೊಂಡು ಇರುತ್ತಾರೆ. ಅಧಿಕಾರ ಇಲ್ಲದಿದ್ದಾಗ ಮಾತ್ರ ಜಾತಿ, ಧರ್ಮ ಎಂದು ಹೋಗುತ್ತಾರೆ. ಧರ್ಮದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾರೆ. ಯಾರೂ ಬಾಲ ಬಿಚ್ಚುವುದಕ್ಕೆ ಆಗುವುದಿಲ್ಲ ಕಾನೂನು ಕಾಪಾಡುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.