ಹೈದರಾಬಾದ್: ಹೈದರಾಬಾದ್‌ನ ಸೆಕ್ಕಾಲ್ ಕಾಲೇಜಿನಲ್ಲಿ ಓದುತ್ತಿದ್ದ 22 ವರ್ಷದ ಜಾದವ್ ಸಾಯಿ ತೇಜಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ದುರ್ಘಟನೆ ನಡೆದಿದೆ. ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ತೇಜಾ, ಹಿರಿಯ ವಿದ್ಯಾರ್ಥಿಗಳಿಂದ ಪೀಡನೆ ಮತ್ತು ಅವಮಾನಗಳಿಗೆ ಒಳಗಾಗಿದ್ದ ಎಂದು ಕುಟುಂಬದವರು ಹಾಗೂ ವಕೀಲರು ಆರೋಪಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯು, ತೇಜಾ ರ‍್ಯಾಗಿಂಗ್‌ಗೆ ಬಲಿಯಾಗಿದ್ದ ಎಂಬುದನ್ನು ದೃಢಪಡಿಸಿದೆ. ಮೂಲಗಳ ಪ್ರಕಾರ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತೇಜಾನನ್ನು ಬಾರ್‌ಗೆ ಎಳೆದುಕೊಂಡು ಹೋಗಿದ್ದಲ್ಲದೇ, ಬೆದರಿಕೆ ಹಾಕಿ ಬಲವಂತವಾಗಿ ಆತನಿಗೆ ಮದ್ಯ ಕುಡಿಸಿದ್ದಲ್ಲದೇ, ಎಲ್ಲರ ಕುಡಿತದ ಸುಮಾರು 10,000 ರೂ. ಬಿಲ್ ಪಾವತಿಸಲು ಒತ್ತಾಯಿಸಿದ್ದರು. ಈ ಆರ್ಥಿಕ ಮತ್ತು ಮಾನಸಿಕ ಒತ್ತಡ ತಾಳಲಾರದೇ ತೇಜಾ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬದ ವಕೀಲ ಕಿಶೋರ್ ತಿಳಿಸಿದ್ದಾರೆ.
ಸಾವಿಗೂ ಮುನ್ನ ತೇಜಾ ತನ್ನ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ, “ನಾನು ಕಾಲೇಜಿಗೆ ಹೋಗುತ್ತಿದ್ದೆ. ನಾಲ್ಕು-ಐದು ಜನ ಬಂದು ನನಗೆ ಬೆದರಿಸುತ್ತಿದ್ದಾರೆ. ಅವರು ನನ್ನ ಬಳಿ ಹಣಕ್ಕಾಗಿ ಕೇಳುತ್ತಿದ್ದಾರೆ, ಹೊಡೆಯುತ್ತಿದ್ದಾರೆ, ನನಗೆ ತುಂಬಾ ಭಯವಾಗುತ್ತಿದೆ. ನಾನು ಸಾಯುತ್ತಿದ್ದೇನೆ, ದಯವಿಟ್ಟು ನನ್ನನ್ನು ರಕ್ಷಿಸಿ,” ಎಂದು ಕಣ್ಣೀರು ಹಾಕುತ್ತಾ ಹೇಳಿಕೊಂಡಿದ್ದಾನೆ. ವಿಡಿಯೋದಲ್ಲಿ ತೇಜಾ ತುಂಬಾ ಆತಂಕಿತನಾಗಿರುವುದು ಕೂಡ ಕಂಡುಬಂದಿದೆ.
ಘಟನೆ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆಯೇ ಸುಮಾರು 300 ಕಿಲೋಮೀಟರ್ ದೂರದಿಂದ ತೇಜಾ ಅವರ ಕುಟುಂಬಸ್ಥರು ಮತ್ತು ವಕೀಲರು ಹಾಸ್ಟೆಲ್‌ಗೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲೇ ಎಲ್ಲವೂ ಮುಗಿದಿತ್ತು.
ಇದೀಗ ಪೊಲೀಸರು ರಾಗಿಂಗ್, ಆರ್ಥಿಕ ಅವಮಾನದ ಹಿನ್ನೆಲೆಯಲ್ಲಿ ತೇಜಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.



















