ನವದೆಹಲಿ: ಏಷ್ಯಾಕಪ್ 2025ರ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರಬಹುದು, ಆದರೆ ಮೈದಾನದ ಹೊರಗೆ ಬಿಸಿಸಿಐ ತೀವ್ರ ಜನಾಕ್ರೋಶ ಎದುರಿಸುತ್ತಿದೆ. “ಹಣ ಗಳಿಸಲು ರಾಷ್ಟ್ರೀಯತೆಯನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿರುವ ಕ್ರಿಕೆಟ್ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
ಈ ವಿವಾದದ ಕೇಂದ್ರಬಿಂದು, ಪಂದ್ಯದ ನಂತರ ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ‘X’ ನಲ್ಲಿ ಹಂಚಿಕೊಂಡ ಪೋಸ್ಟ್. ಪಾಕ್ ವಿರುದ್ಧದ ಗೆಲುವಿನ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಅವರು “ಈ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ” ಎಂದು ಹೇಳಿರುವ ಹೇಳಿಕೆಯನ್ನು ಬಿಸಿಸಿಐ ಪೋಸ್ಟ್ ಮಾಡಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶದ ಭಾವನೆಗಳಿಗೆ ಬೆಲೆ ಕೊಡದೆ ಪಂದ್ಯ ಆಯೋಜಿಸಿ, ಈಗ ಗೆಲುವನ್ನು ಸೈನಿಕರಿಗೆ ಅರ್ಪಿಸುವ ಮೂಲಕ ಬಿಸಿಸಿಐ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಟೀಕಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಪಾಕಿಸ್ತಾನ ಪ್ರಾಯೋಜಿತ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನತೆ ಕಾರಣವಾಗಿತ್ತು. ಈ ಕಾರಣದಿಂದ, ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕೆಂದು ದೇಶಾದ್ಯಂತ ಬಲವಾದ ಕೂಗು ಕೇಳಿಬಂದಿತ್ತು. ಆದರೂ, ಬಿಸಿಸಿಐ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದ್ದು, ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿದ್ದ ಬಿಸಿಸಿಐ, ಏಷ್ಯಾಕಪ್ ಒಂದು ಬಹುರಾಷ್ಟ್ರೀಯ ಟೂರ್ನಿಯಾಗಿದ್ದು, ಇದರಲ್ಲಿ ಭಾಗವಹಿಸುವುದು ಅನಿವಾರ್ಯ. ಸರ್ಕಾರದ ನೀತಿಯಂತೆ, ದ್ವಿಪಕ್ಷೀಯ ಸರಣಿಗಳನ್ನು ಆಡದಿದ್ದರೂ, ಐಸಿಸಿ ಮತ್ತು ಎಸ್ಇಸಿ ಆಯೋಜಿಸುವ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲೇಬೇಕು. ಒಂದು ವೇಳೆ ಬಹಿಷ್ಕರಿಸಿದರೆ, ಅದು ಮುಂದೆ ಭಾರತವು ಒಲಿಂಪಿಕ್ಸ್‌ನಂತಹ ದೊಡ್ಡ ಕ್ರೀಡಾಕೂಟಗಳನ್ನು ಆಯೋಜಿಸುವ ಅವಕಾಶಕ್ಕೆ ಧಕ್ಕೆ ತರಬಹುದು ಎಂದು ತಿಳಿಸಿತ್ತು. ಆದಾಗ್ಯೂ, ಈ ಸಮರ್ಥನೆಗೆ ಒಪ್ಪದ ಅಭಿಮಾನಿಗಳು, ಹಣದಾಸೆಗಾಗಿ ಬಿಸಿಸಿಐ ದೇಶದ ಘನತೆಯನ್ನು ಪಣಕ್ಕಿಟ್ಟಿದೆ ಎಂದು ಆರೋಪಿಸಿದ್ದಾರೆ. ಪಂದ್ಯದ ನಂತರ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದು, ಮೈದಾನದಲ್ಲಿನ ಉದ್ವಿಗ್ನತೆಗೆ ಸಾಕ್ಷಿಯಾಗಿತ್ತು. ಒಟ್ಟಿನಲ್ಲಿ, ಈ ಪಂದ್ಯವು ಕ್ರಿಕೆಟ್‌ಗಿಂತ ಹೆಚ್ಚಾಗಿ, ಭೌಗೋಳಿಕ-ರಾಜಕೀಯ ಸಂಘರ್ಷದ ವೇದಿಕೆಯಾಗಿ ಮಾರ್ಪಟ್ಟಿದೆ.