ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ದೀಪಾವಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇಪಿಎಫ್ಒ ಸದಸ್ಯರು ಎಟಿಎಂಗಳಲ್ಲಿ ಪಿಎಫ್ ವಿತ್ ಡ್ರಾ ಮಾಡುವುದು, ಆಟೋಮ್ಯಾಟಿಕ್ ಆಗಿ ಪಿಎಫ್ ಕ್ಲೇಮ್ ಅರ್ಜಿಗಳ ವಿಲೇವಾರಿ ಸೇರಿ ಹಲವು ಸೌಲಭ್ಯಗಳು ಇರುವ ಇಪಿಎಫ್ಒ 3.0 ವ್ಯವಸ್ಥೆಯನ್ನು ದೀಪಾವಳಿಗೂ ಮೊದಲೇ ಜಾರಿಗೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವುದು ಸೇರಿ ಸದಸ್ಯರ ಯಾವುದೇ ಸಮಸ್ಯೆಗಳನ್ನು ಕ್ಷಿಪ್ರವಾಗಿ ಬಗೆಹರಿಸುವುದು, ಉತ್ತಮ ಸೇವೆ ಒದಗಿಸುವುದು ಇಪಿಎಫ್ಒ ಗುರಿಯಾಗಿದೆ. ಉದ್ಯೋಗಿಗಳು ಮದುವೆ, ವೈದ್ಯಕೀಯ ಖರ್ಚು ಅಥವಾ ಮಕ್ಕಳ ಶಿಕ್ಷಣದಂತಹ ತುರ್ತು ವೆಚ್ಚಗಳ ಸಂದರ್ಭಗಳಲ್ಲಿ ತಮ್ಮ ಪಿಎಫ್ ಖಾತೆಯಿಂದ ಹಣ ಹಿಂಪಡೆಯಬಹುದು. ಆದರೆ, ಈಗ ಈ ಪ್ರಕ್ರಿಯೆ ಸ್ವಲ್ಪ ಸಂಕೀರ್ಣವಾಗಿದೆ. ಇದನ್ನು ಸರಳಗೊಳಿಸಲು ಕೇಂದ್ರ ಸರ್ಕಾರ ‘ಇಪಿಎಫ್ಒ 3.0’ ಎಂಬ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಹೊಸ ಡಿಜಿಟಲ್ ವ್ಯವಸ್ಥೆಯ ಪ್ರಮುಖ ಸೌಲಭ್ಯ ಅಂದರೆ, ಎಟಿಎಂ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯ. ಇದರಿಂದ ತುರ್ತು ಸಂದರ್ಭಗಳಲ್ಲಿ ಹಣಕ್ಕಾಗಿ ಕಾಯುವ ಅಗತ್ಯ ಇರುವುದಿಲ್ಲ. ಎಟಿಎಂಗೆ ಹೋಗಿ, ನಿಮ್ಮ ಆಧಾರ್ ಕಾರ್ಡ್ ಅಥವಾ ಪಿಎಫ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ ಬಳಸಿ ಹಣ ವಿತ್ ಡ್ರಾ ಮಾಡಬಹುದು ಎಂದು ತಿಳಿದುಬಂದಿದೆ.
ಇಪಿಎಫ್ಒ 3.0 ಜಾರಿಯಾದ ಬಳಿಕ ಸ್ವಯಂಚಾಲಿತವಾಗಿ ಪಿಎಫ್ ಕ್ಲೇಮ್ ಅರ್ಜಿಗಳೂ ವಿಲೇವಾರಿಯಾಗುವ ಕಾರಣ 2-3 ದಿನಗಳಲ್ಲಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಎಟಿಎಂ ಮೂಲಕ ಸೌಲಭ್ಯ ಪಡೆಯದವರು ಇದನ್ನು ಬಳಸಬಹುದಾಗಿದೆ. ಇಪಿಎಫ್ಒ 3.0 ಜಾರಿಯಿಂದ ಸುಮಾರು 8 ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ.



















