ಚಿತ್ರದುರ್ಗ: “ಕೋರ್ಟ್ ಮೆಟ್ಟಿಲ ಮೇಲೆ ನಿನ್ನ ತೀರ್ಮಾನ ನಾನು ಮಾಡುತ್ತೇನೆ” ಎಂದು ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವ ಹೇಳುವ ಹಾಗೆಯೆ, ನಮ್ಮ ಗಣೇಶ ಇಂದು ಸಿದ್ದರಾಮಯ್ಯನವರಿಗೆ ವಿಧಾನಸೌಧ ಮೆಟ್ಟಿಲ ಮೇಲೆ ನಿನ್ನ ತೀರ್ಮಾನ ಮಾಡುತ್ತೇನೆ ಎಂದು ಹೇಳುತ್ತಾನೆ ಎಂದು ಡಿಜೆ ಬ್ಯಾನ್ ವಿಚಾರವಾಗಿ ಕಾಂತಾರ ಸಿನಿಮಾಕ್ಕೆ ಸಿದ್ದರಾಮಯ್ಯ ಸರ್ಕಾರವನ್ನು ಹೋಲಿಕೆ ಮಾಡಿ ಎಂಎಲ್ ಸಿ ಕೆ.ಎಸ್ ನವೀನ್ ಆಕ್ರೋಶ ಹೊರ ಹಾಕಿದ್ದಾರೆ
ಚಿತ್ರದುರ್ಗದಲ್ಲಿ ವರದಿಗಾರರೊಂದಿಗೆ ಮಾತನಾಡಿ ನವೀನ್, ಕಳೆದ ಬಾರಿ ನಮ್ಮ ಗಣಪತಿಯನ್ನು ಪೊಲೀಸ್ ಜೀಪಿನಲ್ಲಿ ಕೂರಿಸಿದ ಪರಿಣಾಮ ನಿಮ್ಮ ಕುರ್ಚಿ ಅಲ್ಲಾಡುತ್ತಿದೆ. ನೀವು ವಿಧಾನಸೌಧದ 3ನೇ ಮಹಡಿಯಲ್ಲಿ ಎಷ್ಟು ದಿನ ಇರುತ್ತಿರಾ ಎಂದು ನಿಮಗೇ ಗೊತ್ತಿಲ್ಲ. ನೀವು ಈಗ ಕೈ ಹಾಕಿದ್ದು ದಕ್ಷಿಣ ಭಾರತದ ಅತೀ ದೊಡ್ಡ ಗಣಪತಿಗೆ, “ಚಿತ್ರದುರ್ಗದವರಾದ ನಾವು 15ನೇ ಶತಮಾನದ ದಂಡಿಗೆ- ದಾಳಿಗೆ ಹೆದರಿಲ್ಲ, ಸಿದ್ಧರಾಮಯ್ಯನವರಿಗೆ ಹೆದರುತ್ತೇವಾ ?” ಎಂದು ಲೇವಡಿ ಮಾಡಿದ್ದಾರೆ.
ಮನೆ ಮನೆಗೆ ಮದಕರಿ ನಾಯಕರು, ಒನಕೆ ಓಬವ್ವರನ್ನು ಹುಟ್ಟುಹಾಕುವ ಸಾಮರ್ಥ್ಯವಿದೆ. ಇಲ್ಲಿನ ಡಿಸಿ ಹಾಗೂ ಎಸ್ಪಿಗಳು ಸಿಎಂ ಕೈಗೊಂಬೆಗಳಾಗಿದ್ದಾರೆ. ಇವರ ರಿಮೋಟ್ ಕಂಟ್ರೋಲ್ ಸಿಎಂ ಕೈಯ್ಯಲ್ಲಿದೆ. ಶಿವಮೊಗ್ಗದಲ್ಲಿ ಎಸ್ಪಿ, ಡಿಸಿ ಮುಂದೆ ನಿಂತು ಶೋಭಾಯಾತ್ರೆ ನಡೆಸಿ ಕೊಟ್ಟಿದ್ದಾರೆ. ಚಿತ್ರದುರ್ಗದಲ್ಲಿ ಮಾತ್ರ ಯಾಕೆ ಡಿಜೆ ನಿರ್ಬಂಧ ಹಾಕಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಲ್ಲಿ ಆದಂತೆ ಕಾಲ್ತುಳಿತ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಕಳೆದ 19 ವರ್ಷಗಳಿಂದ ಒಂದು ಸಣ್ಣ ಮಗುವಿಗೂ ಇಲ್ಲಿ ತೊಂದರೆ ಆಗಿಲ್ಲ. ಎಸ್ಪಿ ತಮ್ಮ ಕರ್ತವ್ಯ ಮಾಡಬೇಕು, ಪೊಲೀಸ್ ಇಲಾಖೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದಾರೆ.
ಡಿಜೆ ಬ್ಯಾನ್ ಮಾಡಬೇಕು ಎಂದು ಎಲ್ಲೂ ಹೈಕೋರ್ಟ್ ಆದೇಶ ಮಾಡಿಲ್ಲ. ಲಕ್ಷಾಂತರ ಯುವಕರ ಕೊರಳಲ್ಲಿನ ಕೇಸರಿ ಶಾಲು ಇವರಿಗೆ ಕಾಣಿಸುತ್ತದೆ. ಕೇಸರಿ ಬಣ್ಣ ನೋಡಿದ ತಕ್ಷಣ ಅವರ ಸೀಟಿಗೆ ಬೆಂಕಿ ಬೀಳತ್ತದೆ. ಹಾಗಾಗಿ, ಜನ ಸೇರುವುದನ್ನು ತಪ್ಪಿಸುವುದಕ್ಕೆ ಸಿಎಂ ಹೀಗೆ ಮಾಡ್ತಿದಾರೆ ಎಂದು ಆರೋಪಿಸಿ, ನಾವು ಇಂದು 2 ಸಾವಿರ ಜನ ಸೇರಿದ್ದಿವಿ, ನೀವು ನಮ್ಮನ್ನು ಬಂಧನ ಮಾಡಬಹುದು. ನಾಳೆ 20 ಸಾವಿರ ಜನ ಸೇರಿಸುತ್ತೀವಿ. ಶೋಭಾಯಾತ್ರೆ ದಿನ 5 ಲಕ್ಷ ಜನರನ್ನು ಸೇರಸ್ತೀವಿ, ತಾಕತ್ತಿದರೆ ಬಂಧಿಸಿ ಎಂದು ಸಿಎಂಗೆ ಸವಾಲು ಹಾಕಿದ್ದಾರೆ.
ಈ ಹೋರಾಟಕ್ಕೆ ಇಡೀ ದೇಶದ ಬೆಂಬಲವಿದೆ, ನಾವು ಮುಂದುವರಿಯೋಣ. ಗಣೇಶನ ಮುಂದೆ ಪಟಾಕಿ ಹೊಡೆದವರ ಮೇಲೆ ಕೇಸ್ ಹಾಕಿದ್ದಾರೆ. ಬಾಂಬ್ ಹಾಕಿದವರನ್ನು ಡಿಸಿಎಂ ಬ್ರದರ್ಸ್ ಎಂದು ಹೇಳುತ್ತಾರೆ. ಇಂತಹ ಧಿಕ್ಕಾರದ ಸರ್ಕಾರವನ್ನು ನಾವು ನೋಡಿಲ್ಲ. ಹೋರಾಟದ ಮೂಲಕ ಈ ದರಿದ್ರ ಸರಕಾರಕ್ಕೆ ಸಂದೇಶ ಕೊಡಬೇಕಿದೆ. ಸರ್ಕಾರ ಪ್ರತೀ ವರ್ಷದಂತೆ ಈ ವರ್ಷವು ಶೋಭಾಯಾತ್ರೆಗೆ ಅವಕಾಶ ಕೊಡಲೇಬೇಕು. ಇಲ್ಲವಾದರೆ ಸಿಎಂ ನ್ಯಾಯ ತೀರ್ಮಾನವನ್ನು ಗಣೇಶ ವಿಧಾನಸೌಧ ಮೆಟ್ಟಿಲ ಮೇಲೆ ಮಾಡುತ್ತಾನೆ ಎಂದು ಹೇಳಿದ್ದಾರೆ.



















