‘ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಹಳೆಯ ಸಂದರ್ಶನವೊಂದು ಮರು ವೈರಲ್ ಆದ ಹಿನ್ನೆಲೆಯಲ್ಲಿ , ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಕುರಿತ “ಹುಕ್ಕಾ ವಿವಾದ” ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್ ಅವರ ತಂದೆ ಮತ್ತು ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್, ಧೋನಿ ಮತ್ತು ಕಪಿಲ್ ದೇವ್ ಅವರಂತಹ ಹಿರಿಯ ಆಟಗಾರರು ಸಹ ಆಟಗಾರರನ್ನು “ಅತ್ಯಂತ ಕೆಟ್ಟದಾಗಿ (sht)” ನಡೆಸಿಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ಯೋಗರಾಜ್ ವಾಗ್ದಾಳಿ
ಇನ್‌ಸೈಡ್‌ಸ್ಪೋರ್ಟ್ ಜೊತೆ ಮಾತನಾಡಿದ ಯೋಗರಾಜ್ ಸಿಂಗ್, “ಈ ವಿಷಯ ಕೇವಲ ಇರ್ಫಾನ್ ಪಠಾಣ್‌ಗೆ ಸೀಮಿತವಾಗಿಲ್ಲ. ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಮತ್ತು ಹರಭಜನ್ ಸಿಂಗ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಹರಭಜನ್ ಅವರನ್ನು ತಂಡದಿಂದ ‘ನೊಣದಂತೆ’ ತೆಗೆದುಹಾಕಲಾಯಿತು ಎಂದು ಹೇಳಿದ್ದರು. ಧೋನಿ ಯಾಕೆ ಹೀಗೆ ಮಾಡಿದರು ಎಂಬುದರ ಬಗ್ಗೆ ತನಿಖೆಯಾಗಬೇಕು. ಅವರು ಉತ್ತರಿಸಲು ಬಯಸುತ್ತಿಲ್ಲ, ಉತ್ತರ ನೀಡದವರಲ್ಲಿ ತಪ್ಪಿತಸ್ಥ ಮನಸ್ಸಿರುತ್ತದೆ” ಎಂದು ಹೇಳಿದ್ದಾರೆ.
ಧೋನಿ ಮಾತ್ರವಲ್ಲದೆ, ಕಪಿಲ್ ದೇವ್ ಮತ್ತು ಬಿಶನ್ ಸಿಂಗ್ ಬೇಡಿ ಅವರಂತಹ ಆಟಗಾರರು ಕೂಡ ಸಹ ಆಟಗಾರರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಯೋಗರಾಜ್ ಆರೋಪಿಸಿದ್ದಾರೆ. ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಒಮ್ಮೆ ಕಪಿಲ್ ದೇವ್ ಅವರ ತಲೆಗೆ ಗನ್ ಹಿಡಿದಿದ್ದೆ ಎಂದೂ ಅವರು ಹಿಂದಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
“ನಾನು ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಎಂಎಸ್ ಧೋನಿ ಅವರ ಬಗ್ಗೆ ಮಾತನಾಡಬಲ್ಲೆ, ಏಕೆಂದರೆ ನಾನು ಅವರೊಂದಿಗೆ ಆಡಿದ್ದೇನೆ. ಅವರು ಉಳಿದವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ತಪ್ಪು ತಪ್ಪೇ. ನಮ್ಮ ಕ್ರಿಕೆಟಿಗರನ್ನು ಮತ್ತು ತಂಡವನ್ನು ನಮ್ಮ ನಾಯಕರೇ ನಾಶಮಾಡಿದರು ಎಂದು ನಾನು ಬಹಿರಂಗವಾಗಿ ಹೇಳುತ್ತೇನೆ” ಎಂದು ಯೋಗರಾಜ್ ಸಿಂಗ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ “ಹುಕ್ಕಾ ವಿವಾದ” ಹುಟ್ಟಿಕೊಂಡಿದ್ದು, ಐದು ವರ್ಷಗಳ ಹಿಂದಿನ ಇರ್ಫಾನ್ ಪಠಾಣ್ ಅವರ ಸಂದರ್ಶನವೊಂದರಿಂದ. ಅದರಲ್ಲಿ, ತಮಗಾಗಿ ಹುಕ್ಕಾ ವ್ಯವಸ್ಥೆ ಮಾಡುವ ಆಟಗಾರರಿಗೆ ಧೋನಿ ತಂಡದಲ್ಲಿ ಆದ್ಯತೆ ನೀಡುತ್ತಿದ್ದರು ಎಂದು ಪಠಾಣ್ ಪರೋಕ್ಷವಾಗಿ ಆರೋಪಿಸಿದ್ದರು. ಈ ವಿಡಿಯೋ ಇತ್ತೀಚೆಗೆ ವೈರಲ್ ಆಗಿ, ಧೋನಿಯ ನಾಯಕತ್ವದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
……….



















