ಬೆಂಗಳೂರು: ಪ್ರತಿ ತಿಂಗಳು ಹಣಕಾಸಿಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಸೆಪ್ಟೆಂಬರ್ ನಲ್ಲೂ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ರದ್ದು ಸೇರಿ ಹಲವು ನಿಯಮಗಳು ಬದಲಾಗಿವೆ. ಇದರ ಜತೆಗೆ, ಸೆಪ್ಟೆಂಬರ್ ತಿಂಗಳಲ್ಲಿ ಹಲವು ಹಣಕಾಸು ಚಟುವಟಿಕೆಗಳಿಗೆ ಡೆಡ್ ಲೈನ್ ನಿಗದಿಪಡಿಸಲಾಗಿದೆ. ಸಂಬಂಧಪಟ್ಟವರು ಈ ಚಟುವಟಿಕೆಗಳನ್ನು ಕೈಗೊಳ್ಳದಿದ್ದರೆ, ದಂಡ ಪಾವತಿಸಬೇಕಾಗುತ್ತದೆ.
1. ಐಟಿ ರಿಟರ್ನ್ಸ್ ಸಲ್ಲಿಕೆ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಹಾಗಾಗಿ, ಉದ್ಯೋಗಿಗಳು ಕೂಡಲೇ ಐಟಿ ರಿಟರ್ನ್ಸ್ ಸಲ್ಲಿಸುವುದು ಅತ್ಯವಶ್ಯಕವಾಗಿದೆ. ಇದಕ್ಕೂ ಮೊದಲು 2024-25ನೇ ಸಾಲಿನ ಐಟಿಆರ್ ಸಲ್ಲಿಸಲು ಜುಲೈ 31ರ ಗಡುವು ನೀಡಲಾಗಿತ್ತು. ಇದನ್ನು ಸೆಪ್ಟೆಂಬರ್ 15ಕ್ಕೆ ವಿಸ್ತರಿಸಲಾಗಿತ್ತು. ನಿಗದಿತ ಅವಧಿಯೊಳಗೆ ಐಟಿಆರ್ ಸಲ್ಲಿಸದಿದ್ದರೆ ದಂಡ ವಿಧಿಸಲಾಗುತ್ತದೆ.
2. ಆಧಾರ್ ಕಾರ್ಡ್ ಅಪ್ ಡೇಟ್
ದೇಶದ ಬಹುತೇಕ ಜನ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೆ, ಹೆಚ್ಚಿನ ಜನರ ಆಧಾರ್ ಕಾರ್ಡ್ ನಲ್ಲಿ ವಿಳಾಸ, ಹೆಸರು ಸೇರಿ ಕೆಲವು ತಪ್ಪುಗಳಾಗಿರುತ್ತವೆ. ಇಲ್ಲವೇ ಕೆಲವೊಂದಿಷ್ಟು ಜನ ವಲಸೆ ಹೋದ ಕಾರಣ ವಿಳಾಸ ಬದಲಿಸಬೇಕಾಗುತ್ತದೆ. ಹಾಗಾಗಿ, ಸೆಪ್ಟೆಂಬರ್ 14ರವರೆಗೆ ಉಚಿತವಾಗಿ ಆಧಾರ್ ಅಪ್ ಡೇಟ್ ಮಾಡಲು ಅವಕಾಶ ನೀಡಲಾಗಿದೆ. ಗಡುವು ಮುಗಿದ ಬಳಿಕ ಅಪ್ ಡೇಟ್ ಮಾಡಲು ಹೋದರೆ, 1 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
3. ಯುಪಿಎಸ್ ಆಯ್ಕೆಗೆ ಗಡುವು
ಕೇಂದ್ರ ಸರ್ಕಾರಿ ನೌಕರರಿಗಾಗಿ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತಂದಿದೆ. ಈಗಾಗಲೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್ ಪಿ ಎಸ್) ಯೋಜನೆಯನ್ನು ಆಯ್ಕೆ ಮಾಡಿಕೊಂಡವರು, ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರ ಗಡುವು ನೀಡಲಾಗಿದೆ. ಕೇಂದ್ರ ನೌಕರರು ಸೆ.30ರೊಳಗೆ ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.