ಗ್ರೇಟರ್ ನೋಯ್ಡಾ: ವರದಕ್ಷಿಣೆ ಪಿಡುಗು ದೇಶದಲ್ಲಿ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಸಾಕ್ಷಿಯೆಂಬಂತೆ, ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬಳನ್ನು ಪತಿ ಹಾಗೂ ಕುಟುಂಬಸ್ಥರು ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. 36 ಲಕ್ಷ ರೂ. ವರದಕ್ಷಿಣೆ ತರದ ಕಾರಣಕ್ಕೆ ಪತಿ ಹಾಗೂ ಆತನ ಕುಟುಂಬಸ್ಥರು ಮಹಿಳೆಗೆ ಚಿತ್ರಹಿಂಸೆ ನೀಡಿ, ಜೀವಂತವಾಗಿ ಸುಟ್ಟುಹಾಕಿದ್ದಾರೆ. ಈ ಭಯಾನಕ ಕೃತ್ಯಕ್ಕೆ ಆಕೆಯ ಪುಟ್ಟ ಮಗನೇ ಪ್ರತ್ಯಕ್ಷ ಸಾಕ್ಷಿ.

ಬೆಂಕಿ ಹೊತ್ತಿಕೊಂಡ ಸ್ಥಿತಿಯಲ್ಲಿ ಮಹಿಳೆಯೊಬ್ಬರು ಮೆಟ್ಟಿಲುಗಳಿಂದ ನಡೆದು ಬರುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಅಮ್ಮನ ಮೇಲೆ ಏನೋ ಸುರಿದು, ಬೆಂಕಿ ಹಚ್ಚಿದರು:
“ಅವರು ಮೊದಲು ಅಮ್ಮನ ಮೈಮೇಲೆ ಏನನ್ನೋ ಸುರಿದ್ರು. ನಂತರ ಕಪಾಳಕ್ಕೆ ಹೊಡೆದು ಲೈಟರ್‌ನಿಂದ ಬೆಂಕಿ ಹಚ್ಚಿದರು,” ಎಂದು ಪುಟ್ಟ ಬಾಲಕ ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ವಿವರಿಸಿದ್ದಾನೆ. “ನಿಮ್ಮ ತಂದೆಯೇ ನಿಮ್ಮ ತಾಯಿಯನ್ನು ಕೊಂದರಾ?” ಎಂದು ಕೇಳಿದಾಗ, ಅವನು ತಲೆಯಾಡಿಸಿ ಹೌದೆಂದು ಒಪ್ಪಿಕೊಂಡಿದ್ದಾನೆ.
ಮೃತ ಮಹಿಳೆಯನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಒಂಬತ್ತು ವರ್ಷಗಳ ಹಿಂದೆ ಗ್ರೇಟರ್ ನೋಯ್ಡಾದ ಸಿರ್ಸಾ ನಿವಾಸಿ ವಿಪಿನ್ ಭಾಟಿಯನ್ನು ಆಕೆ ವಿವಾಹವಾಗಿದ್ದಳು. ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಪೀಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಸಹೋದರಿಯ ಆರೋಪ
ನಿಕ್ಕಿಯ ಅಕ್ಕ ಕಾಂಚನ್ ಕೂಡ ಇದೇ ಕುಟುಂಬಕ್ಕೆ ವಿವಾಹವಾಗಿದ್ದು, ತನ್ನ ಕಣ್ಣೆದುರೇ ಸಹೋದರಿಯನ್ನು ಸುಟ್ಟು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. “ನಮಗಿಬ್ಬರಿಗೂ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡುತ್ತಿದ್ದರು. ಮನೆಯಿಂದ 36 ಲಕ್ಷ ರೂ. ತರುವಂತೆ ಕೇಳಿದರು. ಗುರುವಾರ ನನಗೂ ಹಲ್ಲೆ ನಡೆಸಿದ್ದರು. ‘ಒಬ್ಬಳಿಗೆ ವರದಕ್ಷಿಣೆ ಸಿಕ್ಕಿದೆ, ಇನ್ನೊಬ್ಬಳದ್ದೇನು ಕಥೆ? ನೀನು ಸಾಯುವುದೇ ಲೇಸು. ನಾನು ಮತ್ತೊಂದು ಮದುವೆಯಾಗುತ್ತೇವೆ‘ ಎಂದು ಬೆದರಿಕೆ ಹಾಕಿದ್ದರು,” ಎಂದು ಕಾಂಚನ್ ಹೇಳಿದ್ದಾರೆ.
“ನನ್ನ ತಂಗಿಯನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ. ಅವರು ನನ್ನ ಸಹೋದರಿಗೆ ಹೇಗೆ ನೋವು ಕೊಟ್ಟರೋ, ಅವರಿಗೂ ಅದೇ ರೀತಿ ಶಿಕ್ಷೆಯಾಗಬೇಕು,” ಎಂದು ಅವರು ಕಣ್ಣೀರು ಹಾಕಿದ್ದಾರೆ.
ಭಾರೀ ಪ್ರತಿಭಟನೆ
ನೆರೆಹೊರೆಯವರ ಸಹಾಯದಿಂದ ನಿಕ್ಕಿಯನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಸಹೋದರಿ ಕಾಂಚನ್ ನೀಡಿದ ದೂರಿನನ್ವಯ ಕಸ್ನಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪತಿ ವಿಪಿನ್ ಭಾಟಿ, ಮೈದುನ ರೋಹಿತ್ ಭಾಟಿ, ಅತ್ತೆ ದಯಾ, ಮತ್ತು ಮಾವ ಸತ್ವೀರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತಿ ವಿಪಿನ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಘಟನೆಯನ್ನು ಖಂಡಿಸಿ, ಕಸ್ನಾ ಪೊಲೀಸ್ ಠಾಣೆಯ ಹೊರಗೆ ನೂರಾರು ಜನರು ಜಮಾಯಿಸಿ ‘ನಿಕ್ಕಿಗೆ ನ್ಯಾಯ ಸಿಗಲಿ‘ (Justice for Nikki) ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.



















