ಗುವಾಹಟಿ: ಅಕ್ರಮ ವಲಸಿಗರ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವ ಅಸ್ಸಾಂ ಸರ್ಕಾರವು, ಈಗ ಅಕ್ರಮ ವಲಸೆ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಇನ್ನು ಮುಂದೆ ಹೊಸ ಆಧಾರ್ ಕಾರ್ಡ್‌ಗಳನ್ನು ವಿತರಿಸುವುದಿಲ್ಲ ಎಂದು ಘೋಷಿಸಿದೆ.
ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯುವುದನ್ನು ತಡೆಯುವುದೇ ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದೂ ಸರ್ಕಾರ ತಿಳಿಸಿದೆ. ಅಧಿಕೃತ ಸರ್ಕಾರಿ ಅಧಿಸೂಚನೆ ಹೊರಡಿಸಿದ ನಂತರ, ಅಕ್ಟೋಬರ್ ಮೊದಲ ವಾರದಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ.

ಗುರುವಾರ ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ನೀಡುವುದಿಲ್ಲ. ಪರಿಶಿಷ್ಟ ಜಾತಿ, ಪಂಗಡ ಮತ್ತು ಚಹಾ ತೋಟದ ಬುಡಕಟ್ಟು ಜನಾಂಗದವರಿಗೆ ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಆಧಾರ್ ಕಾರ್ಡ್ ನೀಡಲಾಗುವುದು. ಇನ್ನೂ ಅರ್ಜಿ ಸಲ್ಲಿಸದವರು ಸೆಪ್ಟೆಂಬರ್ ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆ ಬಳಿಕ ಕೇವಲ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ಮಾತ್ರ ವಿನಾಯಿತಿಗಳನ್ನು ಪರಿಗಣಿಸಲಾಗುವುದು ಮತ್ತು ಅಂತಿಮ ಅನುಮೋದನೆಯ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇರುತ್ತದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರನ್ನು ಗುರುತಿಸಿ ಗಡಿಪಾರು ಮಾಡುವ ರಾಜ್ಯವ್ಯಾಪಿ ಅಭಿಯಾನ ತೀವ್ರಗೊಂಡಿರುವ ಬೆನ್ನಲ್ಲೇ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಸ್ಸಾಂನಲ್ಲಿ ಈ ಅಕ್ರಮ ವಲಸೆ ಸಮಸ್ಯೆಯು ದೀರ್ಘಕಾಲದಿಂದ ರಾಜಕೀಯ ಮತ್ತು ಸಾಮಾಜಿಕ ಉದ್ವಿಗ್ನತೆಗೆ ಕಾರಣವಾಗಿದೆ. ಅಕ್ರಮ ವಲಸಿಗರು ತಮ್ಮ ವಾಸ್ತವ್ಯವನ್ನು ಕಾನೂನುಬದ್ಧಗೊಳಿಸಲು ಆಧಾರ್ ಕಾರ್ಡ್ ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ ಎಂಬುದು ಸರ್ಕಾರದ ವಾದವಾಗಿದ್ದು, ಈ ಲೋಪವನ್ನು ಸರಿಪಡಿಸಲು ಈ ಕಠಿಣ ನಿಯಂತ್ರಣವನ್ನು ಜಾರಿಗೆ ತರಲಾಗುತ್ತಿದೆ.
ಇದೇ ವೇಳೆ, ಅಂತಾರಾಷ್ಟ್ರೀಯ ಗಡಿಗೆ ಸಮೀಪವಿರುವ ಧುಬ್ರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಾಂಗ್ಲಾದೇಶ ಪರ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನಗಳ ಬಗ್ಗೆಯೂ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. “ನಮ್ಮ ‘ಚಿಕನ್ ನೆಕ್’ ಎಂದು ಕರೆಯಲ್ಪಡುವ ಸೂಕ್ಷ್ಮ ಸಿಲಿಗುರಿ ಕಾರಿಡಾರ್ ಪ್ರದೇಶಕ್ಕೆ ಇದರಿಂದ ತೀವ್ರ ಅಪಾಯವಿದೆ,” ಎಂದು ಅವರು ಎಚ್ಚರಿಸಿದ್ದಾರೆ.



















