ಉಡುಪಿ: ಹಿಂದೂ ಧಾರ್ಮಿಕ ಕ್ಷೇತ್ರಗಳ ರಕ್ಷಣೆ ಪರ ನಿಂತಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಹಿತ ಬಿಜೆಪಿ ನಾಯಕರನ್ನು ನಿಂದಿಸಿ ಮಾನಹಾನಿಕರ, ಅಸಹ್ಯಕರ ಮಾತುಗಳನ್ನಾಡಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ಜಗಜ್ಜಾಹೀರಾಗಿದ್ದು, ಆಧಾರವಿಲ್ಲದೇ ಸುಳ್ಳು ಆರೋಪಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ತಕ್ಷಣವೇ ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಯಾರಾದರೂ ಧಾರ್ಮಿಕ ಕ್ಷೇತ್ರಗಳ ಪರ ವಹಿಸಿ ಮಾತುಗಳನ್ನಾಡಿದರೂ ಅವರ ಚಾರಿತ್ರ್ಯಹರಣ ಮಾಡುವ ಮೂಲಕ ಬಾಯಿ ಮುಚ್ಚಿಸುವ ಷಡ್ಯಂತ್ರ ರೂಪಿಸುತ್ತಿರುವ ಅಪಾಯಕಾರಿ ಮನಃಸ್ಥಿತಿ ಹೊಂದಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಶೀಘ್ರದಲ್ಲೇ ಬಂಧಿಸಿ ಸೂಕ್ತ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಬಿಜೆಪಿ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ, ಸೈಬರ್ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಾಲಂ ಅನ್ವಯ ಬಂಧಿಸುವಂತೆ ಜಿಲ್ಲಾಧ್ಯಕ್ಷರು ಆಗ್ರಹಿಸಿದ್ದಾರೆ.



















