ಬೆಂಗಳೂರು: ಇದೇನಿದ್ದರೂ ಸೈಬರ್ ವಂಚನೆಯ ಕಾಲ. ಸೈಬರ್ ವಂಚಕರು ಜನರ ಮೊಬೈಲ್ ನಿಂದ ಹಣ ಎಗರಿಸಲು ಕಾಯುತ್ತಿರುತ್ತಾರೆ. ಸ್ವಲ್ಪ ಯಾಮಾರಿದರೂ ಲಕ್ಷಾಂತರ ರೂಪಾಯಿ ಎಗರಿಸಿಬಿಡುತ್ತಾರೆ. ಇನ್ನು, ನಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡು, ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ನಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಕಾರ್ಡ್ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ತಿಳಿದುಕೊಂಡು, ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ.
ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡು, ಅದೇ ನಂಬರ್ ಮೂಲಕ ಸಾಲ ಮಾಡಿದವರೂ ಇದ್ದಾರೆ. ಇನ್ನು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ, ಸೈಬರ್ ಮೂಲಕ ಜನರ ಹಣ ಲಪಟಾಯಿಸುವ, ಕೊನೆಗೆ ಅದು ನಿಮ್ಮ ತಲೆಗೇ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈಗ ಆನ್ ಲೈನ್ ಮೂಲಕವೇ ನಮ್ಮ ಹೆಸರಿನಲ್ಲಿರುವ ಸಿಮ್ ಗಳನ್ನು ಪತ್ತೆ ಹಚ್ಚಬಹುದು. ಹಾಗೆಯೇ, ಅವುಗಳನ್ನು ಬ್ಲಾಕ್ ಕೂಡ ಮಾಡಬಹುದು. ಹೇಗೆ ಅನ್ನುವುದರ ವಿವರಣೆ ಇಲ್ಲಿದೆ.
ಪತ್ತೆ ಹಚ್ಚುವುದು ಹೇಗೆ?
- ಟೆಲಿಕಾಂ ಇಲಾಖೆಯ (DoT) ಅಧಿಕೃತ ಸರ್ಕಾರಿ ಸಂಚಾರ್ ಸಾಥಿ (Sanchar Saathi) ಪೋರ್ಟಲ್ನ TAFCOP ವಿಭಾಗಕ್ಕೆ ಭೇಟಿ ನೀಡಬೇಕು.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪೋರ್ಟಲ್ ನ ಮುಖಪುಟದಲ್ಲಿ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಬೇಕು.
- ಬಳಿಕ ನಿಮ್ಮ ಮೊಬೈಲ್ ಗೆ ಬರುವ ಒಟಿಪಿಯನ್ನು ನಮೂದಿಸಿ ನಿಮ್ಮ ಗುರುತನ್ನು ದೃಢೀಕರಿಸಬೇಕು.
- ಆಗ ನಿಮ್ಮ ಆಧಾರ್ ಐಡಿ ಅಡಿಯಲ್ಲಿ ಬಳಕೆಯಲ್ಲಿರುವ ಎಲ್ಲ ಮೊಬೈಲ್ ನಂಬರ್ ಪಟ್ಟಿ ಕಾಣಿಸುತ್ತದೆ.
- ಈ ಪಟ್ಟಿಯಲ್ಲಿ ನಿಮಗೆ ಸೇರದ ಅಥವಾ ನೀವು ಗುರುತಿಸದ ಮೊಬೈಲ್ ನಂಬರ್ ಗಳಿದ್ದರೆ ಅವುಗಳನ್ನು ನನ್ನ ಸಂಖ್ಯೆಯಲ್ಲ ಎಂದು ಗುರುತಿಸಿ ಪೋರ್ಟಲ್ ಮೂಲಕವೇ ದೂರು ಸಲ್ಲಿಸಬಹುದು. ಇದಾದ ಬಳಿಕ ಆ ನಂಬರ್ ಅನ್ನು ಬಂದ್ ಮಾಡಿಸಬಹುದು.



















