ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಡೀ ಜಗತ್ತಿನ ವಿರುದ್ಧ ವ್ಯಾಪಾರ ಯುದ್ಧಕ್ಕೆ ಇಳಿಯುವ ಮೂಲಕ “ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ” ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟೀವ್ ಹ್ಯಾಂಕೆ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮೇಲೆ ಅಮೆರಿಕ ಶೇ.50 ಸುಂಕ ಹೇರಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವಂತೆಯೇ ಹ್ಯಾಂಕೆ ಅವರಿಗೆ ಈ ಹೇಳಿಕೆ ಹೊರಬಿದ್ದಿದೆ.
ಟ್ರಂಪ್ ಅವರ ಸುಂಕ ನೀತಿಗಳು “ಪೂರ್ಣವಾಗಿ ನಿಷ್ಪ್ರಯೋಜಕ” ಮತ್ತು “ಮರಳಿನ ಮೇಲೆ ಕಟ್ಟಿದ ಸೌಧ”ದಂತೆ ಎನ್ನುವುದು ಹ್ಯಾಂಕೆ ಅವರ ವಾದವಾಗಿದೆ. ಟ್ರಂಪ್ ಅವರ ಈ ಆರ್ಥಿಕ ತತ್ವಗಳೇ “ಸಂಪೂರ್ಣವಾಗಿ ಅಸಮಂಜಸ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಶತ್ರು ಸ್ವತಃ ತನ್ನನ್ನು ತಾನು ನಾಶ ಮಾಡಿಕೊಳ್ಳುತ್ತಿರುವಾಗ ಆತನ ದಾರಿಗೆ ಅಡ್ಡ ಬರಬಾರದು ಎಂಬುದು ನೆಪೋಲಿಯನ್ ನೀತಿ. ಟ್ರಂಪ್ ಈಗ ಅದೇ ರೀತಿ ತಮ್ಮನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹ್ಯಾಂಕೆ ಹೇಳಿದ್ದಾರೆ.
ಭಾರತದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಕಾಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಟ್ರಂಪ್ ಅವರ ಈ ನಿರ್ಧಾರಗಳ “ಸೌಧ” ಶೀಘ್ರದಲ್ಲೇ ಕುಸಿದು ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಹ್ಯಾಂಕೆ, ಅಮೆರಿಕನ್ನರ ಖರ್ಚು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚಾಗಿರುವುದರಿಂದ ಅಲ್ಲಿ ಭಾರಿ ವ್ಯಾಪಾರ ಕೊರತೆ ಉಂಟಾಗಿದೆ, ಮುಂದೆಯೂ ಉಂಟಾಗಲಿದೆ ಎಂದಿದ್ದಾರೆ.
ಭಾರತ ಮತ್ತು ಇತರೆ ದೇಶಗಳ ಪ್ರತಿಕ್ರಿಯೆಗಳು
ಭಾರತವು ರಷ್ಯಾದಿಂದ ತೈಲ ಆಮದು ಮುಂದುವರಿಸಿದ್ದಕ್ಕೆ ಟ್ರಂಪ್ ಆಡಳಿತವು ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ಹೇರಿ, ನಂತರ ಅದನ್ನು ಶೇ.50ಕ್ಕೆ ಹೆಚ್ಚಿಸಿದೆ. ಈ ನಿರ್ಧಾರದ ಬೆನ್ನಲ್ಲೇ ಭಾರತದ ಜವಳಿ, ಕಡಲ ಉತ್ಪನ್ನಗಳು ಮತ್ತು ಚರ್ಮದ ಉತ್ಪನ್ನಗಳ ರಫ್ತು ಮೇಲೆ ತೀವ್ರ ಪರಿಣಾಮ ಬೀರಲಾರಂಭಿಸಿದೆ. ಅಲ್ಲದೇ, ಶೇ.50ರ ಸುಂಕದಿಂದಾಗಿ ಈಗ ಬ್ರೆಜಿಲ್ ಜೊತೆಗೆ ಭಾರತವೂ ಅಮೆರಿಕದಿಂದ ಅತ್ಯಧಿಕ ಸುಂಕ ಎದುರಿಸುವ ದೇಶದ ಪಟ್ಟಿಗೆ ಸೇರಿದೆ. ಅಮೆರಿಕದ ಈ ಉದ್ಧಟತನವನ್ನು ರಷ್ಯಾ, ಚೀನಾ ಸೇರಿದಂತೆ ಹಲವು ದೇಶಗಳು ಖಂಡಿಸಿವೆ.
ಇನ್ನೊಂದೆಡೆ ಟ್ರಂಪ್ ಅವರು ಈ ಸುಂಕ ವಿವಾದ ಬಗೆಹರಿಯುವವರೆಗೂ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸುಂಕದ ವಿರುದ್ಧ ತೀರ್ಪು ಬಂದರೆ “1929ರ ಮಹಾ ಆರ್ಥಿಕ ಹಿಂಜರಿಕೆ”ಯಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ತಮ್ಮ ಸುಂಕಗಳಿಂದ ಷೇರು ಮಾರುಕಟ್ಟೆ ಮತ್ತು ದೇಶದ ಆರ್ಥಿಕತೆಗೆ ಭಾರಿ ಲಾಭವಾಗುತ್ತಿದೆ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.


















