ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (SIT) ತನಿಖೆ ವಿಚಾರದಲ್ಲಿ ಸರ್ಕಾರ ಜಾಣ ಹೆಜ್ಜೆಯನ್ನು ಇಟ್ಟಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ತನಿಖಾ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಅನಾಮಿಕ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ಹಲವಾರು ಅಸಹಜ ಸಾವಾಗಿರುವ ಶವಗಳನ್ನು ಪ್ರಭಾವಿ ವ್ಯಕ್ತಿಯೊಬ್ಬನ ಸೂಚನೆಯಂತೆ ಹೂತಿದ್ದೇನೆ ಎಂದು ದೂರು ನೀಡಿರುವ ಬೆನ್ನಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ನುರಿತ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಜನರ ಮನವಿಗೆ ಸ್ಪಂದಿಸಿ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು ಈಗ ಧರ್ಮಸ್ಥಳದ ಅರಣ್ಯದಲ್ಲಿ ಉತ್ಕನನದ ಕಾರ್ಯಾಚರಣೆ ಮಾಡಲಾಗುತ್ತಿದೆ.
ಎಸ್‌ಐಟಿ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿ ತಕ್ಷಣಕ್ಕೆ ಯಾವುದೇ ಮಧ್ಯಂತರ ವರದಿಯನ್ನು ಪಡೆಯದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ ಮೌಖಿಕವಾಗಿ ತನಿಖಾ ಪ್ರಗತಿ ಮಾಹಿತಿಯನ್ನು ಪಡೆಯಲು ಮುಂದಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಬಂದಿದೆ.
ಹೈಕಮಾಂಡ್‌ಗೂ ಸಿಎಂ ಸಿದ್ದರಾಮಯ್ಯ ಮೌಖಿಕ ಮಾಹಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆಗಸ್ಟ್ 5 ರಂದು ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಹುಲ್ ಆಗಮನಕ್ಕೂ ಮುನ್ನ ಪ್ರಕರಣದ ಬಗ್ಗೆ ಹೈಕಮಾಂಡ್‌ಗೆ ಸಿಎಂ ಮಾಹಿತಿ ನೀಡಲು ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಕರ್ನಾಟಕ ನ್ಯೂಸ್ ಬೀಟ್ ಗೆ ಕಾಂಗ್ರೆಸ್ ಮೂಲಗಳು ತಿಳಿಸಿವೆ



















