ಬೆಂಗಳೂರು: ದೇಶದ ಕೋಟ್ಯಂತರ ರೈತರ ಬದುಕಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಧನ-ಧಾನ್ಯ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯೂ ದೊರೆತಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಈ ಯೋಜನೆಗೆ ಕೇಂದ್ರ ಸರ್ಕಾರ 24,000 ಕೋಟಿ ರೂ ವೆಚ್ಚ ಮಾಡಲಿದೆ. ಇದು ಒಂದು ವರ್ಷಕ್ಕೆ ಸರ್ಕಾರ ನೀಡುವ ನೆರವು. ಈ ರೀತಿ ಆರು ವರ್ಷ ಕಾಲ ಸರ್ಕಾರವು ಯೋಜನೆಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಲಿದೆ. ಈ ಯೋಜನೆಯಿಂದ ದೇಶದ 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ.
ಯೋಜನೆ ಜಾರಿ ಏಕೆ?
ಕಡಿಮೆ ಬೆಳೆ ಇಳುವರಿ ಹೊಂದಿರುವ ರೈತರು ಹಾಗೂ ಕಡಿಮೆ ಇಳುವರಿ ನೀಡುತ್ತಿರುವ ಕೃಷಿ ಪ್ರದೇಶಗಲ್ಲಿರುವವರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಕಡಿಮೆ ಕೃಷಿ ಇಳುವರಿ ಹೊಂದಿರುವ 100 ಜಿಲ್ಲೆಗಳನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ. ಕೃಷಿ ಉತ್ಪಾದಕತೆ ಹಾಗೂ ಬಂಜರು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಗುರಿ ಇದೆ.
ಅಲ್ಲದೆ, ಕಡಿಮೆ ಉತ್ಪಾದಕತೆ ಹಾಗೂ ಕೃಷಿಯಲ್ಲಿ ಕಡಿಮೆ ಸಾಧನೆ ಮಾಡಿರುವ 100 ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ. ರಾಜ್ಯ ಸರ್ಕಾರದ ನಿಕಟ ಸಹಭಾಗಿತ್ವದೊಂದಿಗೆ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಈ ಯೋಜನೆಯಿಂದ 1.7 ಕೋಟಿ ರೈತರಿಗೆ ಪ್ರಯೋಜನ ಆಗಲಿದೆ. ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು ಮತ್ತು ರಸಗೊಬ್ಬರಗಳ ಲಭ್ಯತೆ, ರೈತರಿಗಾಗಿ ಸಾಲ ಮತ್ತು ಸಬ್ಸಿಡಿ ಯೋಜನೆಗಳಿಗೆ ಬೆಂಬಲವು ಸರ್ಕಾರದ ಉದ್ದೇಶವಾಗಿದೆ.
ಕೃಷಿ ಕ್ಷೇತ್ರವನ್ನು ಉತ್ತೇಜಿಸಲು, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಆಹಾರ ಸರಬರಾಜು ವ್ಯವಸ್ಥೆಗಳನ್ನು ಸುಧಾರಿಸಲು ಅನುಷ್ಠಾನಗೊಳಿಸಲಾಗಿದೆ. ಇದರ ಪ್ರಮುಖ ಉದ್ದೇಶವೆಂದರೆ ಕೃಷಿಯಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು, ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದು, ಕೃಷಿ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸುವುದಾಗಿದೆ.



















