ಹಿರಿಯ ನಟಿ ಬಿ. ಸರೋಜಾದೇವಿ (B Saroja Devi) ಅಸ್ತಂಗತರಾಗಿದ್ದು, ನಟ ಅರ್ಜುನ್ ಸರ್ಜಾ ಅಂತಿಮ ದರ್ಶನ ಪಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗದ ದೊಡ್ಡ ಅಧ್ಯಾಯ ಇಂದು ಮುಗಿದು ಹೋಗಿದೆ. ಬಿ. ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಮಾತೃಸ್ವರೂಪ ಎಂದರೆ ತಪ್ಪಾಗಲ್ಲ. ತುಂಬಲಾರದ ನಷ್ಟ ಎಂಬ ಪದವನ್ನು ಎಲ್ಲರೂ ಉಪಯೋಗಿಸುತ್ತಾರೆ. ಆದರೆ, ಅದರ ನಿಜವಾದ ಅರ್ಥ ನಮಗೆ ಭಾಸವಾಗುವುದು ಸರೋಜಮ್ಮನ ರೀತಿಯ ವ್ಯಕ್ತಿಗಳು ನಿಧನರಾದಾಗ. ಸರೋಜಮ್ಮ ಅವರ ನಟನೆ ಬಗ್ಗೆ ಮಾತನಾಡಬೇಕಾ? ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಬೇಕಾ? ಎಲ್ಲದರಲ್ಲೂ ಅವರು ಪರಿಪೂರ್ಣ ವ್ಯಕ್ತಿ ಆಗಿದ್ದರು’ ಎಂದು ಅರ್ಜುನ್ ಸರ್ಜಾ (Arjun Sarja) ಹೇಳಿದ್ದಾರೆ.
ಅವರಲ್ಲಿ ಯಾವಾಗಲೂ ಮುಗ್ಧತೆ ಇತ್ತು. ಹೀಗಾಗಿಯೇ ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಸರೋಜಮ್ಮ ಇನ್ನಿಲ್ಲ ಎಂಬ ವಿಷಯ ತಿಳಿದ ಕೂಡಲೇ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಜೀರ್ಣಿಸಿಕೊಳ್ಳಲು ಆಗದಷ್ಟು ಸತ್ಯ ಆಯಿತು ಇದು. ಅವರು ಚೆನ್ನೈಗೆ ಬಂದಾಗಲೆಲ್ಲ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬರುತ್ತಿದೆ. ನನ್ನನ್ನು ಯಾವಾಗಲೂ ಅವರು ಮಗ ಎಂದೇ ಕರೆಯುತ್ತಿದ್ದರು ಎಂದು ಹೇಳಿದ್ದಾರೆ.



















