ನವದೆಹಲಿ: ಗಡಿಯಲ್ಲಿ ಭಾರತದೊಂದಿಗೆ ಪದೇ ಪದೆ ಕ್ಯಾತೆ ತೆಗೆಯುವ ಚೀನಾ ಈಗ ಬೇರೆ ಮಾರ್ಗದ ಮೂಲಕ ತನ್ನ ಕುತ್ಸಿತ ಬುದ್ಧಿಯನ್ನು ಪ್ರಯೋಗಿಸಲಾರಂಭಿಸಿದೆ. ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಹಬ್ ಆಗಿ ಮೆರೆಯಬಾರದು ಎಂಬ ಕಾರಣಕ್ಕೆ ಚೀನಾ ವಾಮಮಾರ್ಗ ಹಿಡಿದಿದೆ. ಭಾರತದಲ್ಲಿ ಆ್ಯಪಲ್‌ನ ಐಫೋನ್ ಉತ್ಪಾದನೆಯನ್ನು ವಿಸ್ತರಿಸುವ ಯೋಜನೆಗೆ ಚೀನಾ ಅಡ್ಡಗಾಲು ಹಾಕಿದೆ.
ಆ್ಯಪಲ್‌ನ ಪ್ರಮುಖ ತಯಾರಕ ಕಂಪನಿಯಾದ ತೈವಾನ್ ಮೂಲದ ಫಾಕ್ಸ್‌ಕಾನ್ ಮೇಲೆ ಭಾರತದ ತನ್ನ ಕಾರ್ಖಾನೆಗಳಿಂದ 300ಕ್ಕೂ ಹೆಚ್ಚು ಚೀನಾದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ವಾಪಸ್ ಕರೆಸಿಕೊಂಡಿದೆ. ಇದರ ಜೊತೆಗೆ, ಭಾರತಕ್ಕೆ ಆಗಮಿಸಬೇಕಿದ್ದ ಅತ್ಯಗತ್ಯ ಯಂತ್ರೋಪಕರಣಗಳ ರವಾನೆಯನ್ನೂ ಚೀನಾ ವಿಳಂಬಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ಈ ಕ್ರಮಗಳು ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮತ್ತು ಐಫೋನ್ 17 ಉತ್ಪಾದನೆಯ ವೇಗವನ್ನು ಕಾಯ್ದುಕೊಳ್ಳುವ ಆಪಲ್‌ನ ಯೋಜನೆಗೆ ತೀವ್ರ ಆಘಾತವನ್ನುಂಟು ಮಾಡಿವೆ. ಸೆಪ್ಟೆಂಬರ್ ತಿಂಗಳಲ್ಲಿ ಐಫೋನ್ 17 ಬಿಡುಗಡೆಗೆ ತಯಾರಿ ನಡೆಯುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಫಾಕ್ಸ್ ಕಾನ್ ಕಂಪನಿಯ ಘಟಕಗಳಿವೆ. ಇಲ್ಲಿ ಐಫೋನ್ ತಯಾರಿಕೆಯ ಕೆಲಸ ನಡೆಯುತ್ತದೆ. ಈ ಕಂಪನಿಗಳ ಒಟ್ಟು ನೌಕರರ ಪೈಕಿ ಶೇ.1ರಷ್ಟು ಮಂದಿ ಚೀನೀಯರಿದ್ದು, ಅವರೆಲ್ಲ ಎಂಜಿನಿಯರ್, ತಂತ್ರಜ್ಞರಾಗಿದ್ದು ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಈಗ ಚೀನಾದ ಒತ್ತಡಕ್ಕೆ ಮಣಿದು ಫಾಕ್ಸ್‌ಕಾನ್ ಕರ್ನಾಟಕ ಸೇರಿ ಭಾರತದಲ್ಲಿರುವಂತಹ ತನ್ನ ಘಟಕಗಳಿಂದ ತಂತ್ರಜ್ಞರು, ಎಂಜಿನಿಯರ್‌ಗಳನ್ನು ವಾಪಸ್ ಕರೆಸಿಕೊಂಡಿದೆ. ಭಾರತದಲ್ಲಿ ಐಫೋನ್ ತಯಾರಿಕೆಗೆ ಭಾರೀ ಹೊಡೆತ ನೀಡುವ ಚೀನಾದ ಕುತಂತ್ರದ ಭಾಗ ಇದಾಗಿದೆ.
ವಾಣಿಜ್ಯ ಒತ್ತಡ ಮತ್ತು ತಾಂತ್ರಿಕ ರಫ್ತು ನಿರ್ಬಂಧ
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಚೀನಾ ಸರ್ಕಾರವು ತನ್ನ ನಿಯಂತ್ರಣ ಸಂಸ್ಥೆಗಳಿಗೆ ಮತ್ತು ಸ್ಥಳೀಯ ಆಡಳಿತಗಳಿಗೆ ಭಾರತ ಮತ್ತು ಆಗ್ನೇಯ ಏಷ್ಯಾದಂತಹ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ ಮತ್ತು ಕೌಶಲ್ಯಯುತ ಕಾರ್ಮಿಕರ ರಫ್ತನ್ನು ನಿರ್ಬಂಧಿಸಲು ಮೌಖಿಕವಾಗಿ ಸೂಚಿಸಿದೆ ಎನ್ನಲಾಗಿದೆ. ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಹಾಗೂ ಸುಂಕ ಸಮರದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಮೆರಿಕದೊಂದಿಗಿನ ವ್ಯಾಪಾರ ಕದನ ಮಿತಿಮೀರಿರುವಂತೆಯೇ ಚೀನಾದಿಂದ ಉತ್ಪಾದನಾ ಸಾಮರ್ಥ್ಯವನ್ನು ಇತರ ದೇಶಗಳಿಗೆ ವರ್ಗಾಯಿಸುವುದನ್ನು ತಡೆಯುವ ಉದ್ದೇಶವನ್ನು ಚೀನಾ ಹೊಂದಿದೆ ಎಂದೂ ಹೇಳಲಾಗಿದೆ. ಇದರ ಭಾಗವಾಗಿ, ಚೀನಾದಿಂದ ಭಾರತಕ್ಕೆ ರವಾನೆಯಾಗಬೇಕಿದ್ದ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಕ್ಷೇತ್ರಗಳಿಗೆ ಬೇಕಾದ ವಿಶೇಷ ಯಂತ್ರೋಪಕರಣಗಳ ರವಾನೆಯನ್ನೂ ತಡೆಹಿಡಿಯಲಾಗಿದೆ. ಜೊತೆಗೆ, ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಬೇಕಾದ ಅಪರೂಪದ ಅಪರೂಪದ ಅಯಸ್ಕಾಂತಗಳ (Rare Earth Magnets) ರಫ್ತಿಗೂ ಚೀನಾ ಕಡಿವಾಣ ಹಾಕಿದೆ.

ಇನ್ನೊಂದೆಡೆ, ಈ ಕ್ರಮಗಳನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದ ಭಾರತದ ಬೆಳವಣಿಗೆಯನ್ನು ತಡೆಯುವ ಚೀನಾದ ಉದ್ದೇಶಿತ ಕಾರ್ಯತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ. “ಭಾರತವನ್ನು ಚೀನಾ ಒಂದು ದುರ್ಬಲ ಎದುರಾಳಿಯಾಗಿ ನೋಡುತ್ತಿದ್ದು, ಈ ಕ್ರಮವು ತಾಂತ್ರಿಕ ಜ್ಞಾನದ ವರ್ಗಾವಣೆಯನ್ನು ತಡೆಯುವ ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಬೆಳವಣಿಗೆಗೆ ಅಡ್ಡಿಯಾಗುವ ಚೀನಾದ ಯೋಜನೆಯ ಭಾಗವಾಗಿದೆ” ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಫಾಕ್ಸ್‌ಕಾನ್‌ನ ಕಾರ್ಖಾನೆಗಳ ಮೇಲೇನು ಪರಿಣಾಮ?
ತಮಿಳುನಾಡು ಮತ್ತು ಕರ್ನಾಟಕದಲ್ಲಿರುವ ಫಾಕ್ಸ್‌ಕಾನ್‌ನ ಐಫೋನ್ ಉತ್ಪಾದನಾ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಕೇವಲ ಒಂದು ಶೇಕಡಾಕ್ಕಿಂತ ಕಡಿಮೆ ಉದ್ಯೋಗಿಗಳಾಗಿದ್ದರೂ, ಉತ್ಪಾದನೆಯ ನಿರ್ವಹಣೆ, ಗುಣಮಟ್ಟ ನಿಯಂತ್ರಣ ಮತ್ತು ಕಾರ್ಖಾನೆ ಯಾಂತ್ರೀಕರಣದಂತಹ ಪ್ರಮುಖ ಕಾರ್ಯಾಚರಣೆಗಳಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದರು.
ಈ ಎಂಜಿನಿಯರ್‌ಗಳು ಶೆನ್‌ಝೆನ್‌ನಂತಹ ಚೀನಾದ ಬೃಹತ್ ಕಾರ್ಖಾನೆಗಳಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸಿದ ಅನುಭವವುಳ್ಳವರು. ಇವರ ನೈಪುಣ್ಯವನ್ನು ಬಳಸುವ ಉದ್ದೇಶದಿಂದ ಭಾರತದ ಘಟಕಕ್ಕೆ ಕರೆಸಿಕೊಳ್ಳಲಾಗಿತ್ತು. ಈಗ ಇವರೆಲ್ಲರೂ ವಾಪಸ್ ಹೋಗಿರುವುದರಿಂದ, ಭಾರತೀಯ ಕಾರ್ಮಿಕರಿಗೆ ತರಬೇತಿ ನೀಡುವ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ತಾಂತ್ರಿಕ ಜ್ಞಾನದ ವರ್ಗಾವಣೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದೆ.
ಎರಡು ತಿಂಗಳಿಂದ ನಡೆಯುತ್ತಿದೆ ಪ್ರಕ್ರಿಯೆ
ವರದಿಗಳ ಪ್ರಕಾರ, ಕಳೆದ ಎರಡು ತಿಂಗಳಿಂದ ಈ ವಾಪಸಾತಿ ಪ್ರಕ್ರಿಯೆ ಆರಂಭವಾಗಿದ್ದು, ಈಗ ಫಾಕ್ಸ್‌ಕಾನ್‌ನ ಭಾರತದ ಕಾರ್ಖಾನೆಗಳಲ್ಲಿ ಕೇವಲ ತೈವಾನ್‌ನಿಂದ ಬಂದಿರುವ ಬೆಂಬಲ ಸಿಬ್ಬಂದಿ ಮಾತ್ರ ಉಳಿದಿದ್ದಾರೆ ಎನ್ನಲಾಗಿದೆ. ಈ ಬದಲಾವಣೆಯಿಂದ ಐಫೋನ್ 17 ಉತ್ಪಾದನೆಯ ರ‍್ಯಾಂಪ್-ಅಪ್ ಹಂತದಲ್ಲಿ ಉತ್ಪಾದನೆಯ ವೇಗ ಮತ್ತು ದಕ್ಷತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ.
ಆ್ಯಪಲ್‌ನ ಭಾರತದ ಯೋಜನೆಗೆ ತೊಡಕು
ಆ್ಯಪಲ್ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಚೀನಾದ ಮೇಲಿನ ತನ್ನ ಉತ್ಪಾದನಾ ಅವಲಂಬನೆಯನ್ನು ಕಡಿಮೆಗೊಳಿಸಲು ಭಾರತವನ್ನು ಒಂದು ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದೆ. ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮ ಮತ್ತು ಉತ್ಪಾದನೆಗೆ ನೀಡಲಾಗುತ್ತಿರುವ ಆರ್ಥಿಕ ಪ್ರೋತ್ಸಾಹಗಳು ಆ್ಯಪಲ್ ಮತ್ತು ಫಾಕ್ಸ್‌ಕಾನ್‌ನಂತಹ ಕಂಪನಿಗಳನ್ನು ಭಾರತದತ್ತ ಆಕರ್ಷಿಸಿವೆ. ಪ್ರಸ್ತುತ, ಜಾಗತಿಕ ಐಫೋನ್ ಉತ್ಪಾದನೆಯ ಸುಮಾರು 20% ಭಾರತದಲ್ಲಿ ನಡೆಯುತ್ತಿದ್ದು, 2026ರ ವೇಳೆಗೆ ಅಮೆರಿಕಕ್ಕೆ ರವಾನೆಯಾಗುವ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುವ ಗುರಿಯನ್ನು ಆ್ಯಪಲ್ ಹೊಂದಿದೆ.
ಫಾಕ್ಸ್‌ಕಾನ್ ಇತ್ತೀಚೆಗೆ ಬೆಂಗಳೂರಿನ ಸಮೀಪ 2.56 ಬಿಲಿಯನ್ ಡಾಲರ್‌ನ ಹೊಸ ಘಟಕಕ್ಕೆ ಹೂಡಿಕೆ ಮಾಡಿದ್ದು, ಡಿಸೆಂಬರ್ ವೇಳೆಗೆ 100,000 ಐಫೋನ್‌ಗಳನ್ನು ಜೋಡಿಸುವ ಗುರಿಯನ್ನು ಹೊಂದಿತ್ತು. ಆದರೆ, ಚೀನಾದ ಎಂಜಿನಿಯರ್‌ಗಳ ವಾಪಸಾತಿ ಮತ್ತು ಯಂತ್ರೋಪಕರಣಗಳ ವಿಳಂಬವು ಫಾಕ್ಸ್ ಕಾನ್ ಕಂಪನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚೀನಾದ ನಿಲುವಿನಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ವರದಿಗಳು ತಿಳಿಸಿವೆ.
ಫಾಕ್ಸ್‌ಕಾನ್‌ನ ಬದಲಿ ಯೋಜನೆ
ಈ ಸವಾಲನ್ನು ಎದುರಿಸಲು ಫಾಕ್ಸ್‌ಕಾನ್ ಈಗ ತೈವಾನ್ ಮತ್ತು ವಿಯೆಟ್ನಾಂನಿಂದ ತಜ್ಞರನ್ನು ತರಲು ಯೋಜನೆಯನ್ನು ರೂಪಿಸಿದೆ ಮತ್ತು ಭಾರತೀಯ ಕಾರ್ಮಿಕರಿಗೆ ತರಬೇತಿ ನೀಡುವ ಕಾರ್ಯವನ್ನು ತೀವ್ರಗೊಳಿಸಿದೆ. ಆದಾಗ್ಯೂ, ಚೀನಾದ ಎಂಜಿನಿಯರ್‌ಗಳ ದೀರ್ಘಕಾಲದ ಅನುಭವವನ್ನು ತಕ್ಷಣವೇ ಬದಲಾಯಿಸುವುದು ಸವಾಲಿನ ಕೆಲಸವಾಗಿದೆ. ಭಾರತ ಸರ್ಕಾರವು ಈ ಬೆಳವಣಿಗೆಯನ್ನು ಗಂಭೀರವಾಗಿ ಗಮನಿಸುತ್ತಿದೆ. ಇದೇ ವೇಳೆ, ಚೀನಾ ತನ್ನ ನಿರ್ಧಾರಕ್ಕೆ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ ಎಂದು ವರದಿಗಳು ತಿಳಿಸಿವೆ. ಒಟ್ಟಿನಲ್ಲಿ ಈ ಬೆಳವಣಿಗೆಯು ಭಾರತ-ಚೀನಾ ಸಂಬಂಧಗಳಲ್ಲಿ ಒಂದು ಹೊಸ ಒತ್ತಡವನ್ನು ಸೃಷ್ಟಿಸಿದೆ