ಟೆಹ್ರಾನ್: ಇಸ್ರೇಲ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮೂವರು ವ್ಯಕ್ತಿಗಳನ್ನು ಇರಾನ್ ಗಲ್ಲಿಗೇರಿಸಿದೆ. ಸತತ 12 ದಿನಗಳ ತೀವ್ರ ಸಂಘರ್ಷದ ಬಳಿಕ ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದಕ್ಕೆ ಬಂದ ಬೆನ್ನಲ್ಲೇ ಈ ವಿಚಾರ ಬಹಿರಂಗಗೊಂಡಿದೆ.
ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ ಜತೆ ಕೈಜೋಡಿಸುವುದರ ಜೊತೆಗೆ, ಇರಾನ್ನ ಪ್ರಮುಖರೊಬ್ಬರ ಹತ್ಯೆಗೆ ಅಗತ್ಯವಾದ ವಸ್ತುಗಳನ್ನು ಕಳ್ಳಸಾಗಣೆ ಮಾಡಿರುವ ಆರೋಪದಲ್ಲಿ ಈ ಮೂವರನ್ನು ನೇಣಿಗೆ ಏರಿಸಲಾಗಿದೆ ಎಂದು ಮಿಝಾನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಇದಲ್ಲದೇ, ಇಸ್ರೇಲ್ ಜೊತೆ ಸಹಭಾಗಿತ್ವ ಹೊಂದಿದ ಆರೋಪದಲ್ಲಿ ಒಟ್ಟು 700 ಮಂದಿಯನ್ನು ಬಂಧಿಸಲಾಗಿದೆ ಎಂದೂ ತಿಳಿಸಿದೆ.
ಇಸ್ರೇಲ್ ಜೊತೆ ಹಲವು ದಶಕಗಳಿಂದಲೂ ಸಂಘರ್ಷದಲ್ಲಿರುವ ಇರಾನ್, ಈವರೆಗೆ ಇಸ್ರೇಲ್ ಪರ ಗೂಢಚಾರ ನಡೆಸಿದ ಹಾಗೂ ಮೊಸ್ಸಾದ್ ಕಾರ್ಯಾಚರಣೆಗೆ ನೆರವಾದ ಅನೇಕರಿಗೆ ಮರಣದಂಡನೆ ವಿಧಿಸಿದೆ. ಇತ್ತೀಚೆಗೆ ನಡೆದ ಸಂಘರ್ಷದ ವೇಳೆಯೂ ಅನೇಕರು ಮೊಸ್ಸಾದ್ಗೆ ಇರಾನ್ ಕುರಿತ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿ ರವಾನೆ ಮಾಡುತ್ತಿದ್ದ ಶಂಕೆಯ ಮೇರೆಗೆ ಗಲ್ಲಿಗೇರಿಸಲಾಗಿತ್ತು.
ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳ ಸಂಘರ್ಷದ ಬಳಿಕ ಮಂಗಳವಾರವಷ್ಟೇ ಕದನ ವಿರಾಮ ಘೋಷಣೆಯಾಗಿದೆ. ಅದಕ್ಕೂ ಮೊದಲು ಎರಡೂ ದೇಶಗಳ ನಡುವೆ ಭಾರೀ ದಾಳಿ ಹಾಗೂ ಪ್ರತಿದಾಳಿ ನಡೆದಿತ್ತು. ನಂತರ ಅಮೆರಿಕವೂ ಈ ಸಂಘರ್ಷಕ್ಕೆ ಪ್ರವೇಶಿಸಿ, ಇರಾನ್ನ ಮೂರು ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರ ತೀರಿಸುವ ಸಲುವಾಗಿ ಇರಾನ್ ಸೋಮವಾರ ರಾತ್ರಿ ಕತಾರ್ ನಲ್ಲಿರುವ ಅಮೆರಿಕದ ಸೇನಾನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಇದಾದ ಕೆಲವು ಗಂಟೆಗಳಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ, ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸಿದ್ದರು.