ಬೆಂಗಳೂರು: ಸಿಲಿಕಾನ್ ಸಿಟಿಯ ಬಹು ನಿರೀಕ್ಷಿತ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗುತ್ತಿದೆ. ನಾಳೆ ರಾಜ್ಯ ಸರ್ಕಾರದಿಂದ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. ಅಲ್ಲದೇ, ಟೋಲ್ ವಿಧಿಸಲು ಬಿಬಿಎಂಪಿ ಕೂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.
ಸುಮಾರು 19 ಸಾವಿರ ಕೋಟಿ ರೂ. ವೆಚ್ಚದ ಸುರಂಗ ಮಾರ್ಗದ ಕಾಮಗಾರಿಗೆ ಟೆಂಡರ್ ನ್ನು ಸರ್ಕಾರ ಆಹ್ವಾನಿಸಲಿದೆ. ನಗರದ ಹೆಬ್ಬಾಳ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ ಜಂಕ್ಷನ್ ವರೆಗಿನ 17 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತಿದೆ.
ಆದರೆ, ಟನಲ್ ರಸ್ತೆ ನಿರ್ಮಾಣದಿಂದ ಸಾವಿರಾರು ಮನೆಗಳಿಗೆ ತೊಂದರೆಯಾಗುತ್ತದೆ ಎನ್ನಲಾಗುತ್ತಿದೆ. ತಾಂತ್ರಿಕ ತೊಂದರೆಯಿಂದಾಗಿ ಹೆಚ್ಚು ಕಟ್ಟಡಗಳು ಹಾನಿಯಾಗಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಮಗಾರಿಯಿಂದ ಬೆಂಗಳೂರಿನ ಸುಮಾರು 20 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಭಾರೀ ನಷ್ಟ ಉಂಟಾಗುತ್ತದೆ. ಸುಮಾರು 10 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರಿನ ಅಭಾವ ಉಂಟಾಗಲಿದೆ. ಬೃಹತ್ ಕಟ್ಟಡಗಳ ಅಡಿಪಾಯಕ್ಕೆ ಭಾರೀ ತೊಂದರೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಟ್ರಾಫಿಕ್ ಸಮಸ್ಯೆ ಬಗೆಹರಿಸುವುದಕ್ಕಾಗಿ ಸರ್ಕಾರವು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ಟನಲ್ ರಸ್ತೆ ನಿರ್ಮಾಣದಿಂದ ಮನೆಗಳ ಬೋರ್ ವೆಲ್ ಗೆ ಭಾರೀ ಹೊಡೆತ ಬೀಳಲಿದೆ. ಸುರಂಗ ಮಾರ್ಗದಲ್ಲಿ ರಸ್ತೆ ಬರುವ ಹಿನ್ನೆಲೆಯಲ್ಲಿ ಮನೆಗಳ ಬೋರ್ ವೆಲ್ ಗೆ ಸಂಕಷ್ಟ ಎದುರಾಗಲಿದೆ. ಟನಲ್ ರಸ್ತೆ ನಿರ್ಮಾಣಕ್ಕೆ ಅಂತ ಸುಮಾರು ಒಂದು ಸಾವಿರ ಅಡಿ ಅಳಕ್ಕೆ ರಸ್ತೆ ಅಗೆಯಬೇಕಾಗುತ್ತದೆ. ಹೀಗಾಗಿ ಜನರಿಗೆ ತೊಂದರೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಆದರೆ, ಇನ್ನೂ ಸುರಂಗ ಮಾರ್ಗ ನಿರ್ಮಿಸಿಲ್ಲ. ಇದಕ್ಕೂ ಮುಂಚಿತವಾಗಿಯೇ ಟೋಲ್ ಫಿಕ್ಸ್ ಮಾಡಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರು ಟನಲ್ ರಸ್ತೆಯ ಟೋಲ್ ವಸೂಲಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಪ್ರತಿ ಕಿ.ಮೀಗೆ 19 ರೂಪಾಯಿ ಟೋಲ್ ವಿಧಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ.
ಮುಂಬಯಿ ಮಾದರಿಯಲ್ಲಿ ಇಲ್ಲಿಯೂ ಟೋಲ್ ವಿಧಿಸಲು ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. 4 ಚಕ್ರದ ವಾಹನಗಳಿಗೆ ಏಕ ಸಂಚಾರದ ಪೂರ್ಣ ಉದ್ದದ ಸುರಂಗ ಮಾರ್ಗ ಬಳಕೆಗೆ ಪ್ರತಿ ಕಿ.ಮೀಗೆ ಕನಿಷ್ಠ 19 ರೂ. ಟೋಲ್ ವಿಧಿಸಲು ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ ಎನ್ನಲಾಗಿದೆ.