ಬೆಂಗಳೂರು: ಇದೇನಿದ್ದರೂ ಡಿಜಿಟಲ್ ಯುಗ. ವ್ಯಾಪಾರ, ವಹಿವಾಟಿನಿಂದ ಹಿಡಿದು ನೂರಾರು ಚಟುವಟಿಕೆಗಳನ್ನು ಆನ್ ಲೈನ್ ಮೂಲಕವೇ ಮಾಡಬಹುದು. ಅದರಲ್ಲೂ, ಆನ್ ಲೈನ್ ಕೋರ್ಸ್ ಗಳು ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿವೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2017ರಲ್ಲಿ ಸ್ವಯಂ (SWAYAM) ಎಂಬ ವೆಬ್ ಪೋರ್ಟಲ್ ಆರಂಭಿಸಿದ್ದು, 15 ಸಾವಿರಕ್ಕೂ ಹೆಚ್ಚು ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದಾಗಿದೆ.
ಉಚಿತವಾಗಿ ಯಾರು ಬೇಕಾದರೂ ಕೋರ್ಸ್ ಗಳನ್ನು ಕೈಗೊಳ್ಳಬಹುದಾಗಿದೆ. ಸ್ವಯಂ ವೆಬ್ ಸೈಟ್ ನಲ್ಲಿ 15,910ಕ್ಕೂ ಹೆಚ್ಚು ಕೋರ್ಸ್ಗಳಿವೆ. ಇದುವರೆಗೆ 5 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡು ಕೋರ್ಸ್ ಕಲಿತಿದ್ದಾರೆ. ಶಿಕ್ಷಣ ಸಚಿವಾಲಯ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಯು ಮೈಕ್ರೋಸಾಫ್ಟ್ ಸಹಯೋಗದೊಂದಿಗೆ SWAYAM ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದೆ.
ಯಾವೆಲ್ಲ ಕೋರ್ಸ್ ಕಲಿಯಬಹುದು?
ಡಿಜಿಟಲ್ ಮಾರ್ಕೆಟಿಂಗ್, ಎಂಜಿನಿಯರಿಂಗ್, ಮ್ಯಾನೇಜ್ ಮೆಂಟ್, ವಿಜ್ಞಾನ, ಗಣಿತ, ಮಾನವಿಕ, ಭಾಷೆ, ಕಲೆ ಮತ್ತು ಮನರಂಜನೆ, ಡಿಸೈನ್, ಆರೋಗ್ಯ ವಿಜ್ಞಾನ, ಎಥಿಕಲ್ ಹ್ಯಾಕಿಂಗ್, ಕಮ್ಯುನಿಕೇಟಿವ್ ಇಂಗ್ಲಿಷ್, ಅಕೌಂಟನ್ಸಿ ಸೇರಿ ಸಾವಿರಾರು ಕೋರ್ಸ್ ಗಳನ್ನು SWAYAM ವೆಬ್ ಸೈಟ್ ಗೆ ಭೇಟಿ ನೀಡಿ ಅಧ್ಯಯನ ಮಾಡಬಹುದಾಗಿದೆ.
ಸ್ವಯಂ ಮೂಲಕ ನೀಡಲಾಗುವ ಕೋರ್ಸ್ ಗಳು ಉಚಿತವಾಗಿವೆ. ಆದರೆ ಪ್ರಮಾಣಪತ್ರದ ಅಗತ್ಯವಿರುವ ವಿದ್ಯಾರ್ಥಿಗಳು ರಿಯಾಯಿತಿ ದರದ ಫೀಸ್ ಇರುವ ಪ್ರೊಕ್ಟರ್ಡ್ ಪರೀಕ್ಷೆ ಬರೆಯಬೇಕಾಗುತ್ತದೆ. ಅಧಿಕೃತ ವೆಬ್ ಸೈಟ್ ಗೆ https://swayam.gov.in/ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಆಸಕ್ತಿ ಇರುವವರು 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಅಧ್ಯಯನ ಮಾಡಬಹುದಾದ ಕೊರ್ಸ್ ಗಳಿವೆ. IIT ಗಳು, IIM ಗಳು, IISER ಗಳು ಮುಂತಾದ ಕೇಂದ್ರ ಅನುದಾನಿತ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅಧ್ಯಾಪಕರಿಗೆ ವಿದ್ಯಾರ್ಥಿಗಳಿಗೆ ಕಲಿಸಲು ಅನುವು ಮಾಡಿಕೊಡುತ್ತದೆ.