ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಜ್ಪೆ ಶಾಂತಿಗುಡ್ಡೆ ನಿವಾಸಿ ಅಬ್ದುಲ್ ರಜಾಕ್ (59) ಬಂಧಿತ ಆರೋಪಿ. ಈತ ಹತ್ಯೆಗೆ ಸಂಚು ರೂಪಿಸಿರುವುದು ಮತ್ತು ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಅಬ್ದುಲ್ ರಜಾಕ್ ಈ ಪ್ರಕರಣದ ಪ್ರಮುಖ ಆರೋಪಿ ಮುಜಾಮಿಲ್ನ ತಂದೆ ಎನ್ನಲಾಗಿದೆ. ಪುತ್ರ ಮುಜಾಮಿಲ್, ಅಳಿಯ ನೌಷಾದ್ ಜೊತೆ ಸೇರಿ ಸುಹಾಸ್ ಶೆಟ್ಟಿ ಕೊಲೆಗೆ ಅಬ್ದುಲ್ ರಜಾಕ್ ಸಂಚು ರೂಪಿಸಿದ್ದ ಎಂಬ ಆರೋಪವಿದೆ.
ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.