ಬೆಂಗಳೂರು: ಟೈಯರ್ ಅಂಗಡಿಯಲ್ಲಿ ಅಗ್ನಿ ಅನಾಹುತ ನಡೆದಿರುವ ಘಟನೆಯೊಂದು ನಗರದ ಜೆಸಿ ರಸ್ತೆಯಲ್ಲಿ ನಡೆದಿದೆ.
ಶನಿವಾರ ರಾತ್ರಿ 10.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೆಸಿಬಿಯಿಂದ ಕಟ್ಟಡ ತೆರವು ಮಾಡಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ.
ಈ ಬೆಂಕಿಯ ಕೆನ್ನಾಲೆಗೆ ಅಕ್ಕ- ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದಾಗಿ ಮತ್ತಷ್ಟು ಅನಾಹುತ ತಪ್ಪಿದಂತಾಗಿದೆ. ಟೈಯರ್ ಅಂಗಡಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಕ್ಕದ ಶೈನ್ ಆಟೋ ವಿಂಗ್ಸ್ ಅಂಗಡಿಗೂ ಬೆಂಕಿ ತಗುಲಿತ್ತು. ಗೋಡೆ ಒಡೆದು ಬೆಂಕಿ ನಂದಿಸಲಾಗಿದೆ ಎನ್ನಲಾಗಿದೆ.