ನಾಯಿಗೂ ಒಂದು ಕಾಲ ಅಂತಾ ಯಾರೂ ಸುಮ್ಮನೆ ಹೇಳಿಲ್ಲ ಕಣ್ರಿ. ನಿಜಕ್ಕೂ ಹೈದರಾಬಾದ್ ನ ಈ ನಾಯಿಗೂ ಬಂಪರ್ ಕಾಲ ಕೂಡಿ ಬಂದಿದೆ ಅಂದರೆ ನೀವು ಬೆರಗಾಗ್ತೀರಾ.
ಹೌದು, ಹೈದ್ರಾಬಾದ್ ನ ಐಟಿ ಕಂಪನಿಯೊಂದು ನಾಯಿಗೆ ಕಂಪನಿಯ ಸಂತೋಷಾಧಿಕಾರಿ ಹುದ್ದೆ ನೀಡಿ ಗೌರವಿಸಿದೆ. ಅಚ್ಚರಿಯಾದರೂ ಇದು ನಿಜ. ಡೆನ್ವರ್ ಹೆಸರಿನ ಗೋಲ್ಡನ್ ರಿಟ್ರೀವರ್ ಶ್ವಾನವನ್ನು ಮುಖ್ಯ ಸಂತೋಷಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.
ಲೇಸರ್ ಮೂಲಕ ಕಳೆ ತೆಗೆಯುವ ಮತ್ತು ಕಟಾವಿಗೆ ಅನುವಾಗುವ ರೊಬೊಟ್ ಗಳ ಬಳಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಈ ಕಂಪನಿಯ ಸಿಇಒ ರಾಹುಲ್ ಅರೆಪಾಕ ಶ್ವಾನಕ್ಕೆ ಪಟ್ಟಾಭಿಷೇಕ ಮಾಡಿದ್ದಾರೆ. ಈ ಬಗ್ಗೆ ತಮ್ಮ ಲಿಂಕ್ಡ್ ಇನ್ ನಲ್ಲಿ ಬರೆದುಕೊಂಡಿರುವ ಅವರು, ಡೆನ್ವರ್‌ನನ್ನು ನಮ್ಮ ಕಂಪನಿಯ ಮುಖ್ಯ ಸಂತೋಷಾಧಿಕಾರಿಯಾಗಿ ನೇಮಿಸಿಕೊಂಡಿದ್ದೇವೆ ಎಂದಿದ್ದಾರೆ.
ಈತ ಯಾವುದೇ ಕೋಡಿಂಗ್ ಮಾಡುವುದಿಲ್ಲ. ಬದಲಿಗೆ ದಿನವೂ ಕಚೇರಿಯಲ್ಲಿ ಎಲ್ಲರ ಮನಸ್ಸುಗಳನ್ನು ಕದ್ದು, ಕೆಲಸ ಮಾಡಲು ಶಕ್ತಿ ತುಂಬುತ್ತಾನೆ. ಇದು ನಾವು ತೆಗೆದುಕೊಂಡಿರುವ ಉತ್ತಮ ನಿರ್ಧಾರ ಎಂದು ಪೋಸ್ಟ್ ಮಾಡಿದ್ದಾರೆ. ಈ ನಾಯಿಯ ಉಪಸ್ಥಿತಿಯಿಂದ ಉದ್ಯೋಗಿಗಳಲ್ಲಿ ಉತ್ಸಾಹ ಮತ್ತು ಬಾಂಧವ್ಯ ಇಮ್ಮಡಿಯಾಗಿ, ಕಚೇರಿಯ ವಾತಾವರಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಅವರ ಕೆಲಸವನ್ನು ಉತ್ತಮಗೊಳಿಸಿ ಉತ್ಪಾದಕತೆಯನ್ನು ಹೆಚ್ಚಿಸುವ ಭರವಸೆ ಇದೆ ಅಂತಾ ಸಿಇಒ ಅಭಿಪ್ರಾಯಪಟ್ಚಿದ್ದಾರೆ.



















