ಒಂದಲ್ಲಾ ಎರಡಲ್ಲಾ ಬರೋಬ್ಬರಿ 51 ವರ್ಷಗಳೇ ಗತಿಸಿ ಹೋಗಿವೆ. ಸ್ವತಂತ್ರ ಭಾರತದ ಅತಿ ದೊಡ್ಡ ವೈಜ್ಞಾನಿಕ ಯಶಸ್ಸಿಗೆ ಅಂದು ಭಾರತ ಸಾಕ್ಷಿಯಾಗಿತ್ತು. ಇವತ್ತು ಆಪರೇಷನ್ ಸಿಂಧೂರ್ ಮೂಲಕ ನೆರೆಯ ಪಾಕಿಸ್ತಾನವನ್ನು ನಾವುಗಳು ಬಗ್ಗೆ ಬಡಿದಿದ್ದೇವೆ. ಅತ್ತ ಪಾಕ್, ಭಾರತದ ವಿರುದ್ಧ ಪರಮಾಣು ಅಸ್ತ್ರ ಪ್ರಯೋಗಿಸುವ ಧಮ್ಕಿ ಹಾಕಿತ್ತು. ಆದರೆ, ಭಾರತದ ದಿಟ್ಟ ಉತ್ತರಕ್ಕೆ ಬಾಲ ಸುಟ್ಟ ಬೆಕ್ಕಿನಂತೆ ಪಾಕ್ ಮೂಲೆ ಸೇರಿದೆ.
ಹಾಗಂತ ಕೇವಲ ಪಾಕಿಸ್ತಾನವಷ್ಟೇ ಅಲ್ಲ, ಭಾರತವೂ ಪರಮಾಣು ಅಸ್ತ್ರವನ್ನು ಹೊಂದಿರುವ ಬಲಾಢ್ಯ ದೇಶವೇ ಆಗಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ 50ಕ್ಕೂ ಹೆಚ್ಚು ಅಣು ಅಸ್ತ್ರಗಳ ದಾಸ್ತಾನಿದೆ. ಹಾಗಂತಾ ಈ ಅಣು ಅಸ್ತ್ರದ ಮೈಲಿಗಲ್ಲನ್ನು ಭಾರತ ಸಾಧಿಸಿದ್ದು ಕೂಡಾ ರಣರೋಚಕ ಕಹಾನಿ.
ಸ್ವಾತಂತ್ರ್ಯ ಸಿಕ್ಕ 3 ದಶಕದ ಬಳಿಕ ಸ್ವಾವಲಂಬನೆ
ಆಂಗ್ಲರ ದಬ್ಬಾಳಿಕೆಯ ಸಂಕೋಲೆಯನ್ನು ಭಾರತ 1947ರಲ್ಲೇ ಕಳಚಿಕೊಂಡಿತ್ತು. ಹಾಗಂತಾ ಹಸಿವು, ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟಗಳ ಎಲ್ಲ ದೊಡ್ಡ ಸವಾಲಿನ ಬೆಟ್ಟಗಳನ್ನು ಭಾರತ ಮೊದಲು ದಾಟಬೇಕಿತ್ತು. ಜೊತೆ ಜೊತೆಗೆ ನೆರೆಯ ಪಾಕ್ ಮತ್ತು ಚೀನಾವನ್ನು ಹದ್ದು ಬಸ್ತಿನಲ್ಲಿಡಬೇಕು ಅಂದ್ರೆ ಅದಕ್ಕೆ ಪರಮಾಣು ಶಸ್ತ್ರ ಅಗತ್ಯವಿದ್ದೇ ಇತ್ತು. ಆದರೆ, ಅದನ್ನು ಸಾಧಿಸುವುದು ಮಾತ್ರ ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು. ಇದೆಲ್ಲವನ್ನ ಮೀರಿ ಹೊಸ ಹೆಜ್ಜೆ ಇಡುವ ನಿಟ್ಟಿನಲ್ಲಿ ಭಾರತ ಅವತ್ತು ಆಪರೇಷನ್ ಸ್ಮೈಲಿಂಗ್ ಬುದ್ಧಕ್ಕೆ ಮುನ್ನುಡಿ ಬರೆದಿತ್ತು.
ಐದು ನಿಮಿಷ ತಡವಾಗಿದ್ದೇಕೆ ಆ ದೊಡ್ಡ ಪರೀಕ್ಷೆ?
ಪರಮಾಣು ಪರೀಕ್ಷೆ ನಡೆಸದಂತೆ ಅವತ್ತು ಅಮೆರಿಕ ನಿರ್ಬಂಧಿ ವಿಧಿಸಿತ್ತು. ಭಾರತದ ಮೇಲೆ ಹದ್ದಿನ ಕಣ್ಣಿಟ್ಟು ಕುಳಿತಿತ್ತು ಹಿರಿಯಣ್ಣ. ಆದರೆ ಅಂದಿನ ಕೆಚ್ಚೆದೆಯ ಪ್ರಧಾನಿ ಇಂದಿರಾ ಗಾಂಧಿ, ವಿಜ್ಞಾನಿಗಳ ಒಕ್ಕೂಟಕ್ಕೆ ಮೌಖಿಕ ಆದೇಶ ನೀಡಿಯಾಗಿತ್ತು. ಯಾರ ಹಂಗಿನಲ್ಲೂ ಬದುಕಬೇಕಿಲ್ಲ. ಸಾಧಿಸಿ ತೋರಿಸೋಣ ಎಂದಿದ್ದರು. ಬಾಬಾ ಅಟಾಮಿಕ್ ಸೆಂಟರ್ ನ ವಿಜ್ಞಾನಿಗಳಾದ ರಾಜಾ ರಾಮಣ್ಣ, ಎಪಿಜೆ ಅಬ್ದುಲ್ ಕಲಾಂರ ಸಾರಥ್ಯದಲ್ಲಿ ಪರಮಾಣು ಅಸ್ತ್ರ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗಿತ್ತು.
1974ರ ಮೇ 18ರಂದು ರಾಜಸ್ಥಾನದ ಥಾರ್ ಮರುಭೂಮಿಯ ಪೋಖ್ರಾನ್ ಸೇನಾ ನೆಲೆಯಲ್ಲಿ ಅಣು ಪ್ರಯೋಗಕ್ಕೆ ಮುಹೂರ್ತ ನಿಗದಿಯಾಗಿತ್ತು. ಮುಂಜಾನೆ 8 ಗಂಟೆಗೆ ಅಮೆರಿಕದ ಉಪಗ್ರಹಗಳ ಕಣ್ಣುತಪ್ಪಿಸಿ ಈ ಪ್ರಯೋಗವನ್ನು ಸಾಧಿಸಬೇಕಿತ್ತು. ಇನ್ನೇನು ಎಲ್ಲವೂ ಅಂದುಕೊಂಡಂತೆ ಸಿದ್ಧವಾಗಿತ್ತು. ದುರಾದೃಷ್ಟವೆನ್ನುವಂತೆ ಪೋಖ್ರಾನ್ ನಲ್ಲಿ ದೈತ್ಯ ಮರಳು ಸಹಿತ ಬಿರುಗೀಳಿ ಎದ್ದಿತ್ತು.
ಪರೀಕ್ಷೆಗೆ ಹೋದ ವಿಜ್ಞಾನಿ ಕಾರು ಜಖಂ
ಮೇ 18ರ ಮುಂಜಾನೆ ಭಾರತದ ಮೊದಲ ಸಾಹಸ ಗಾಥೆಗೆ ಕ್ಷಣಗಣನೆ ಆರಂಭವಾಗಿತ್ತು. ಇನ್ನೇನು ಪರೀಕ್ಷೆ ಯಶಸ್ಸಿನ ಹಾದಿ ಹಿಡಿಯಬೇಕು ಅಷ್ಟರಲ್ಲೇ ಸುಂಟರಗಾಳಿ ಬೀಸಿತ್ತು. ಕೆಲಕಾಲದ ನಂತ್ರ ಕಂಟ್ರೋಲ್ ಸ್ಟೇಷನ್ ನಿಂದ 5 ಕಿಲೋಮೀಟರ್ ದೂರದಲ್ಲಿದ್ದ ಅಣು ಬ್ಲ್ಯಾಸ್ಟ್ ಸ್ಟೇಷನ್ ನಲ್ಲಿ ಎಲ್ಲವೂ ಸುಸೂತ್ರವಾಗಿದೆಯಾ ಅನ್ನೋದನ್ನು ಮನದಟ್ಟು ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿಯೇ ವಿಜ್ಞಾನಿ ವೀರೇಂದ್ರ ಸೇಥಿ ಅಖಾಡಕ್ಕಿಳಿದಿದ್ದರು.
ಎಲ್ಲವೂ ಸರಿಯಾಗಿದೆ ಅಂತಾ ಪರೀಕ್ಷೆಸಿ ವಾಪಸ್ ಹೊರಟವರ ವಾಹನ ಕೆಟ್ಟು ನಿಂತಿತ್ತು. ಗಡಿಯಾರ ಓಡುತ್ತಿತ್ತು. ಸೇಥಿ ಕಂಟ್ರೋಲ್ ತಲುಪೋದಕ್ಕೆ ವಾಹನವಿರ್ಲಿಲ್ಲ. ಆದ್ರೆ ದೃತಿಗೆಡದ ಸೇಥಿ, 2 ಕಿಲೋಮೀಟರ್ ಓಡಿಕೊಂಡೇ ನಿಗದಿತ ಸ್ಥಾನ ತಲುಪಿದ್ರು. ಪೋಖ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆಯೂ ಮುಗಿದಿತ್ತು. ಭಾರತದ ಕನಸಿನ ಕೂಸಾದ ಬುದ್ಧ ನಕ್ಕಾಗಿತ್ತು. ಆದ್ರೆ ನಿಗದಿಯಂತೆ 8ಕ್ಕೆ ಆಗಬೇಕಿದ್ದ ಪ್ರಯೋಗ ಸೇಥಿಯವರ ಸಮಸ್ಯೆಯಿಂದಾಗಿ 8 ಗಂಟೆ ಐದು ನಿಮಿಷಕ್ಕೆ ಆಗಿತ್ತು. ಈ ಮೂಲಕ ಭಾರತವೂ ಸ್ವತಂತ್ರ ಅಣ್ವಸ್ತ್ರ ವೀರ ಎನ್ನಿಸಿಕೊಂಡಿತ್ತು. ಇವತ್ತಿಗೆ 51 ವರ್ಷ ಗತಿಸಿದರೂ ಭಾರತದ ಅಂದಿನ ವಿಜ್ಞಾನಿಗಳ ಈ ಸಾಹಸ ಸಮರ ಎಂದಿಗೂ ಇತಿಹಾಸದ ಪುಟದಲ್ಲಿ ಅಜರಾಮರವಾಗಿರಲಿದೆ.