ಪಾಕಿಸ್ತಾನದ ಬೆನ್ನಿಗೆ ನಿಂತ ತಪ್ಪಿಗೆ ಇದೀಗ ಎರಡು ರಾಷ್ಟ್ರಗಳ ಆರ್ಥಿಕತೆಯೇ ಬುಡಮೇಲಾಗೋ ಸನ್ನಿವೇಶ ಸೃಷ್ಟಿಯಾಗಿದೆ. ಹೌದು, ಭಾರತ ವಿರುದ್ಧದ ಸಮರದಲ್ಲಿ ಪಾಕಿಸ್ತಾನಕ್ಕೆ ಕೆಲರಾಷ್ಟ್ರಗಳು ಆರ್ಥಿಕವಾಗಿ ಹಾಗೂ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಭರಪೂರ ನೆರವನ್ನು ನೀಡಿದ್ದವು. ಆದರೆ ಈಗ ಆ ರಾಷ್ಟ್ರಗಳ ಆರ್ಥಿಕತೆಯೇ ಕಂಗಾಲಾಗುವಂಥಾ ಕಾಲ ಸನ್ನಿಹಿತವಾಗಿದೆ. ಅದ್ರಲ್ಲೂ ಪಾಕಿಸ್ತಾನಕ್ಕೆ ಅಸ್ತ್ರಗಳನ್ನು ಕಾಣಿಕೆ ನೀಡಿದ ತಪ್ಪಿಗೆ ಟರ್ಕಿ ಮತ್ತು ಅಜರ್ ಭೈಜಾನ್ ದೇಶಗಳನ್ನು ಈಗ ಬಾಯ್ಕಾಟ್ ಮಾಡಲಾಗಿದೆ.
ಭಾರತೀಯರು ಈ ದೇಶಗಳಿಗೆ ಪ್ರವಾಸವನ್ನು ರದ್ದುಗೊಳಿಸಿ ಅನ್ನೋ ಅಭಿಯಾನ ಶುರುವಾಗಿದೆ. ಈ ಮೂಲಕ ಭಾರತದಿಂದ ಈ 2 ದೇಶಗಳಿಗೆ ಹರಿದು ಹೋಗ್ತಿದ್ದ ಸಾವಿರಾರು ಕೋಟಿ ಆದಾಯಕ್ಕೀಗ ಕತ್ತರಿ ಬಿದ್ದಂತಾಗಿದೆ. ಕಳೆದ ವರ್ಷ ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳಿಗೆ ಭಾರತೀಯರ ಪ್ರವಾಸದಿಂದಾಗಿಯೇ 4 ಸಾವಿರ ಕೋಟಿಗೂ ಹೆಚ್ಚಿನ ಆದಾಯ ಬಂದಿತ್ತು. ಇದೀಗ ಪಾಕ್ ಗೆ ನೆರವು ನೀಡಿದ ಹಿನ್ನಲೆಯಲ್ಲಿ ಭಾರತದ ಹತ್ತಾರು ಟ್ರಾವಲ್ ಬುಕ್ಕಿಂಗ್ ಏಜೆನ್ಸಿಗಳು ಈ ದೇಶಗಳ ಪ್ರವಾಸ ಬುಕ್ಕಿಂಗನ್ನು ರದ್ದುಗೊಳಿಸಿ ನಿರ್ಧಾರ ಕೈಗೊಂಡಿವೆ.
ಇನ್ಮುಂದೆ ಹೊಸದಾಗಿ ಈ ದೇಶಗಳಿಗೆ ಭಾರತದಿಂದ ಯಾವುದೇ ಬುಕ್ಕಿಂಗ್ ಇರೋದಿಲ್ಲ ಅಂತಾ ಈಜಿ ಮೈ ಟ್ರಿಪ್, ಕಾಕ್ಸ್, ಕಿಂಗ್ಸ್ ಸಂಸ್ಥೆಗಳು ದೃಡ ನಿರ್ಧಾರ ಕೈಗೊಂಡಿವೆ. ಅಲ್ಲದೆ ಉದ್ಯಮಿ ಹರ್ಷ್ ಗೋಯಂಕಾ ಕೂಡಾ ತಮ್ಮ ಎಕ್ಸ್ ಖಾತೆಯಲ್ಲಿ ಭಾರತೀಯರು ಈ ದೇಶಗಳ ಪ್ರವಾಸವನ್ನು ರದ್ದುಗೊಳಿಸಿ ಅಂತಾ ಮನವಿ ಮಾಡಿದ್ದಾರೆ. ಈ ಅಭಿಯಾನವೀಗ ಭರ್ಜರಿ ಟ್ರೆಂಡಿಂಗ್ ನಲ್ಲಿದ್ದು, ಪ್ರವಾಸಿಗರು ಕೂಡಾ ಈ 2 ದೇಶಗಳನ್ನು ತಮ್ಮ ಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಟರ್ಕಿ ಮತ್ತು ಅಜರ್ ಭೈಜಾನ್ ಸಾವಿರಾರು ಕೋಟಿಯ ಆದಾಯವನ್ನು ಮಣ್ಣುಪಾಲು ಮಾಡಿಕೊಂಡಿವೆ. ಈ ನಡುವೆ, ಬೆಂಗಳೂರಿನ ಟ್ರಾವೆಲ್ ಏಜೆಂಟ್ ಗಳು ಕೂಡಾ ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಟರ್ಕಿ ಮತ್ತು ಅಜರ್ ಭೈಜಾನ್ ಗೆ ಬುಕ್ಕಿಂಗ್ ನಿಲ್ಲಿಸಿದ್ದಾರೆ.