ನವದೆಹಲಿ: ಜಮ್ಮು-ಕಾಶ್ಮೀರದ ಸಾಂಬಾ ವಲಯದಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ 7 ಮಂದಿ ಉಗ್ರರನ್ನು ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್ಎಫ್) ಹೊಡೆದುರುಳಿಸಿದೆ
(India-Pak War). ಪಾಕಿಸ್ತಾನಿ ರೇಂಜರ್‌ಗಳೇ ಭಯೋತ್ಪಾದಕರಿಗೆ ಭಾರತದೊಳಕ್ಕೆ ನುಸುಳಲು ನೆರವು ನೀಡುತ್ತಿದ್ದರು ಎಂದೂ ಬಿಎಸ್ಎಫ್ ಹೇಳಿದೆ. ಧಾನ್‌ಧಾರ್ ಪೋಸ್ಟ್ ಬಳಿ ನಿರಂತರವಾಗಿ ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ಸೈನಿಕರು ಅಲ್ಲಿಂದ ಭಾರತದೊಳಕ್ಕೆ ಉಗ್ರರನ್ನು ಒಳನುಸುಳಿಸಲು ಯತ್ನಿಸುತ್ತಿದ್ದರು. ಆದರೆ, ಮೊದಲೇ ಅಲರ್ಟ್ ಆಗಿದ್ದ ಬಿಎಸ್ಎಫ್ ಯೋಧರು ಸೂಕ್ತ ಪ್ರತ್ಯುತ್ತರ ನೀಡಿ, ಎಲ್ಲ 7 ನುಸುಳುಕೋರರನ್ನೂ ಹತ್ಯೆಗೈದಿದೆ. ಜೊತೆಗೆ ಪಾಕಿಸ್ತಾನಿ ಪೋಸ್ಟ್‌ಗೆ ಭಾರೀ ಹಾನಿ ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ನುಸುಳುಕೋರರ ಚಲನವಲನಗಳನ್ನು ಭಾರತದ ಕಣ್ಗಾವಲು ಗ್ರಿಡ್ ಪತ್ತೆಹಚ್ಚಿತ್ತು. ಸಾಂಬಾ ವಲಯದಲ್ಲಿ ಈ ನುಸುಳುವಿಕೆ ನಡೆಯುತ್ತಿತ್ತು. ಕೂಡಲೇ ಎಚ್ಚೆತ್ತ ಬಿಎಸ್ಎಫ್ ಯೋಧರು, ಉಗ್ರರನ್ನು ಕೊಲ್ಲುವ ಮೂಲಕ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದರು. ಜೊತೆಗೆ ಪಾಕ್ ಪೋಸ್ಟ್ ಮೇಲೂ ದಾಳಿ ನಡೆಸಿದರು ಎಂದು ಬಿಎಸ್ಎಫ್ ಹೇಳಿದೆ. ಜೊತೆಗೆ ಘಟನೆಯ ವಿಡಿಯೋವನ್ನೂ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ.
ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆಗಳು ಕ್ಷಿಪಣಿಗಳ ಮಳೆ ಸುರಿಸಲು ವಿಫಲ ಯತ್ನ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಜಮ್ಮು, ಪಠಾಣ್ ಕೋಟ್, ಉಧಾಂಪುರದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಸೇನೆ ದಾಳಿ ನಡೆಸಿತ್ತು. ಜೊತೆಗೆ, ರಾಜಸ್ಥಾನ, ಗುಜರಾತ್, ಪಂಜಾಬ್‌ನ ಹಲವು ನಗರಗಳನ್ನೂ ಗುರಿಯಾಗಿಸಿಕೊಳ್ಳಲಾಗಿತ್ತು. ಆದರೆ ಪಾಕ್ ಕಡೆಯಿಂದ ಬಂದ ಎಲ್ಲ ಕ್ಷಿಪಣಿಗಳು ಹಾಗೂ ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ. ಅಲ್ಲದೇ ಈ ಘಟನೆಯಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ತನ್ನ ದಾಳಿ ವಿಫಲವಾಗುತ್ತಿದ್ದಂತೆ ವಿಲ ವಿಲ ಒದ್ದಾಡಿದ ಪಾಕಿ ಸೇನೆ, ಭಾರತೀಯ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ಮುಂದುವರಿಸಿದೆ. ಇದಕ್ಕೂ ಭಾರತೀಯ ಸೇನಾಪಡೆ ತಕ್ಕ ಪ್ರತ್ಯುತ್ತರ ನೀಡಿದೆ.