ಏಪ್ರಿಲ್ 22ರ ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಗೆ ಕಡೆಗೂ ನ್ಯಾಯ ಸಿಕ್ಕಿದೆ. ಸಮಸ್ತ ಭಾರತೀಯರ ಪ್ರತೀಕಾರದ ಕನಸು ನನಸಾಗಿದೆ. ಪಾಕಿಸ್ತಾನದೊಳಗೇ ನುಗ್ಗಿ ಜಿಹಾದಿ ಕ್ರಿಮಿಗಳಿಗೆ ಸಮಾಧಿ ಕಟ್ಟಲಾಗಿದೆ. ಆಪರೇಷನ್ ಸಿಂಧೂರ್ ಹೆಸರಲ್ಲಿ ಬಲಿದಾನಗೈದವರ ಆತ್ಮಗಳಿಗೆ ಗೌರವ ನೀಡಲಾಗಿದೆ. ಇದರ ಬೆನ್ನಲ್ಲೇ, ಇಂಡೋ-ಪಾಕ್ ಗಡಿ ಉದ್ವಿಗ್ನಗೊಂಡಿದೆ. 13ನೇ ದಿನವೂ ಪಾಕ್ ವಿನಾಕಾರಣ ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರಿಸಿದೆ. ಅಮಾಯಕರನ್ನು ಟಾರ್ಗೆಟ್ ಮಾಡಿ ಶೆಲ್ಲಿಂಗ್ ನಡೆಸಿದೆ. ಹಾಗಂತಾ ಭಾರತ ಸುಮ್ಮನೆ ಕೂತಿಲ್ಲ. ಸಮಸ್ತ ಗಡಿಯಲ್ಲಿ ಸೇನೆ ಹದ್ದಿನ ಕಣ್ಣಿಟ್ಟು ಪ್ರತ್ಯುತ್ತರಕ್ಕೆ ಕಾಯುತ್ತಿದೆ.
ರಾಜಸ್ಥಾನ-ಪಂಜಾಬ್ ನಲ್ಲಿ ಹೈಅಲರ್ಟ್ ಘೋಷಣೆ
ನಿನ್ನೆಯಷ್ಟೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ನಡೆಯನ್ನು ಖಂಡಿಸಿದರು. ಅಷ್ಟೇ ಅಲ್ಲಾ ಪಾಕ್ ಹೆದರಿ ಹಿಂದೆ ಸರಿಯುವ ಜಾಯಮಾನದ್ದಲ್ಲ ಅನ್ನೋ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲೇ, ಭಾರತವೂ ಕಟ್ಟೆಚ್ಚರವಹಿಸಿದೆ. ರಾಜಸ್ಥಾನ ಮತ್ತು ಪಂಜಾಬ್ ನಲ್ಲಿ ಹೈಅರ್ಟ್ ಘೋಷಿಸಲಾಗಿದೆ. ಎರಡು ರಾಜ್ಯಗಳಲ್ಲಿ ಪೊಲೀಸರ ರಜೆಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಬಹಿರಂಗ ಸಭೆ, ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ.
ಗಡಿಯಲ್ಲಿ ಕಾವಲಿಗೆ ನಿಂತ ಭಾರತೀಯ ವಾಯು ಪಡೆ
ರಾಜಸ್ಥಾನದೊಟ್ಟಿಗೆ ಪಾಕ್ ಬರೋಬ್ಬರಿ 1037 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಹೀಗಾಗಿಯೇ ರಾಜಸ್ಥಾನದಲ್ಲಿ ಅತಿ ಹೆಚ್ಚು ನಿಗಾವಹಿಸಲಾಗಿದೆ. ಈಗಾಗಲೇ ಗಡಿಯನ್ನು ಸಂಪೂರ್ಣ ಸೀಜ್ ಮಾಡಲಾಗಿದ್ದು, ಬಿಎಸ್ಎಫ್ ಸಿಬ್ಬಂದಿಗೆ ಪಹರೆಯ ಹೊಣೆ ಹೊರಿಸಲಾಗಿದೆ. ಅಷ್ಟೇ ಅಲ್ಲಾ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನೂ ನೀಡಲಾಗಿದೆ. ಜೋಧ್ ಪುರ, ಕೃಷ್ಣಾನಗರ್, ಬಿಕಾನೇರ್ ವಿಮಾನ ನಿಲ್ದಾಣಗಳಲ್ಲಿ ಮೇ 9ರವರೆಗೂ ಸಂಚಾರ ನಿರ್ಬಂಧಿಸಲಾಗಿದೆ. ಇದರೊಟ್ಟಿಗೆ ಯುದ್ಧ ವಿಮಾನಗಳನ್ನು ಗಸ್ತಿಗೆ ನಿಯೋಜಿಸಲಾಗಿದ್ದು, ಪ್ರತಿನಿರ್ಬಂಧಕ ಡಿಫೆನ್ಸ್ ಸಿಸ್ಟಮನ್ನು ಕೂಡಾ ಕಾರ್ಯಗತಗೊಳಿಸಲಾಗಿದೆ. ಸುಖೋಯ್ 30, ಎಂಕೆಐ ಜೆಟ್ ಗಳನ್ನು ಅಖಾಡಕ್ಕಿಳಿಸಲಾಗಿದ್ದು, ಗಂಗಾನಗರದಿಂದ ಕಚ್ ವರೆಗೂ ಕಣ್ಗಾವಲಿಟ್ಟಿದೆ. ಅಷ್ಟೇ ಅಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಸಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಮಧ್ಯೆ, ರೈಲ್ವೆ ಇಲಾಖೆ ಸಿಬ್ಬಂದಿ ರಜೆಗಳನ್ನೂ ರದ್ದು ಮಾಡಲಾಗಿದೆ. ಈ ಮೂಲಕ ಪಾಕ್ ನ ಸಂಭಾವ್ಯ ದಾಳಿಯನ್ನ ಆರಂಭದಲ್ಲೇ ನಾಮಾವಶೇಷ ಮಾಡಲು ಭಾರತೀಯ ಸೇವೆ ಯುದ್ದೋತ್ಸಾಹದಲ್ಲಿ ಕಾದು ಕುಳಿತಿದೆ.