ಬೆಂಗಳೂರು: ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ, ಮಾತೃ ಮಿಲನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಮತ್ತು ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಮಹಾಲಕ್ಷ್ಮಿಪುರದ ಬಿಜಿಎಸ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ಚುಂಚಾದ್ರಿ ಉತ್ಸವ 2025ಕ್ಕೆಇಂದು ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮೊದಲ ದಿನದ ಕ್ರೀಡೋತ್ಸವವನ್ನು ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿಪುರ ಶಾಸಕರಾದ ಗೋಪಾಲಯ್ಯ ಅವರು ಮಾತನಾಡಿ, ಇದೊಂದು ಸಮಯೋಚಿತ ಕಾರ್ಯಕ್ರಮ. ಅನೇಕ ಮಹಿಳೆಯರು ತಮ್ಮಲ್ಲಿನ ಪ್ರತಿಭೆ ಹೊರಹಾಕಲು ಒಂದು ವೇದಿಕೆಯನ್ನು ಹುಡುಕುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಮೂರು ಸಂಘಗಗಳು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಈ ಉತ್ಸವ ಅತ್ಯುತ್ತಮ ಪ್ರಯತ್ನವಾಗಿದೆ. ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರನ್ನೂ ಒಳಗೊಂಡು, ಸಮಾಜದ ಒಳಿತಿಗೆ ಸಂಕಲ್ಪ ತೊಟ್ಟು ಕೈಗೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ಸಂಸ್ಥಾಪಕಿ ಶ್ರೀಮತಿ ಕೆ. ರತ್ನಪ್ರಭಾ ಮಾತನಾಡಿ, ರಾಜ್ಯದ ನಾನಾ ಭಾಗಗಳಿಂದ ಬಂದ ವಿವಿಧ ವಯೋಮಾನ ಹಾಗೂ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ಸಾಕಷ್ಟು ಉತ್ಸಾಹದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಮಹಿಳಾ ಸಬಲೀಕರಣಕ್ಕೆ ಉದಾಹರಣೆಯಾಗಿದೆ. ಈ ರೀತಿಯಾದ ವೇದಿಕೆಯನ್ನು ಕಲ್ಪಿಸಿದ ಸಂಘಟಕರು ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಚುಂಚಾದ್ರಿ ಉತ್ಸವದ ಆಯೋಜಕರಾದ ಭಾರತಿ ಶಂಕರ್ ಅವರು ಮಾತನಾಡಿ, ಕಳೆದ 10 ವರ್ಷಗಳಿಂದ ಮಹಿಳೆಯರಿಗಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. 14 ಜಿಲ್ಲೆಗಳಲ್ಲಿ ಚುಂಚಾದ್ರಿ ಪ್ರತಿಷ್ಠಾನದ ನಿರ್ದೇಶಕರಿದ್ದು, ಸಂಘಟನೆಯನ್ನು ಮಾಡಿಕೊಂಡು ಈ ಉತ್ಸವವನ್ನು ಮಾಡುತ್ತಾ ಬಂದಿದ್ದೇವೆ. ಈ ದಿನದ ಕಾರ್ಯಕ್ರಮಕ್ಕೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಿಂದ 18 ರಿಂದ 78 ವರ್ಷ ವಯೋಮಿತಿಯೊಳಗಿನ ಮಹಿಳೆಯರು ಆಗಮಿಸಿದ್ದು, ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಒಟ್ಟು 11 ವಾಲಿಬಾಲ್ (18 ರಿಂದ 35 ವರ್ಷಗಳು) ಮತ್ತು 22 ಥ್ರೋಬಾಲ್ (35 ವರ್ಷ ಮೇಲ್ಪಟ್ಟ) ತಂಡಗಳು ಕ್ರೀಡೆಯಲ್ಲಿ ಭಾಗವಹಿಸಿವೆ.

ನಾಳೆ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಮಹಿಳೆಯರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಶಂಸಾ ಪತ್ರವನ್ನು ನೀಡಲಾಗುವುದು ಜೊತೆಗೆ ವಿಜೇತರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸ್ಪೂರ್ತಿ ನೀಡಿದಂತಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮಹಾಪೌರರಾದ ಹೇಮಲತಾ ಗೋಪಾಲಯ್ಯ, ಮಾಜಿ ಉಪಮಹಾಪೌರರಾದ ಹರೀಶ್ ಎಸ್, ಕಾಂಗ್ರೆಸ್ ಮುಖಂಡರಾದ ಕುಸುಮಾ ಹನುಮಂತರಾಯಪ್ಪ, ಮಾಜಿ ಶಾಸಕರಾದ ಎನ್.ಎಲ್ ನರೇಂದ್ರ ಬಾಬು ಮತ್ತು ಸಮುದಾಯದ ನಾಯಕರಾದ ಸುಲೋಚನಾ ಜಯರಾಮ್, ಶಿವರಾಜ್, ಸಲಹಾ ಸಮಿತಿ ಸದಸ್ಯರಾದ ವೇಣುಗೋಪಾಲ್, ಆನಂದ್, ಆಂಜನೇಯ ರೆಡ್ಡಿ, ಗೋಪಾಲ್, ಬಾಬಿ ವೆಂಕಟೇಶ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.