ಬೆಂಗಳೂರು: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಭಾರತೀಯ ಮಾನಕ ಬ್ಯೂರೋದಲ್ಲಿ (Bureau of Indian Standards) 160 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 9 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ವಿದ್ಯಾರ್ಹತೆ ಏನು?
160 ಹುದ್ದೆಗಳೂ ಕನ್ಸಲ್ಟಂಟ್ ಹುದ್ದೆಗಳಾಗಿವೆ. ಬಿಐಎಸ್ ಅಧಿಸೂಚನೆ ಪ್ರಕಾರ ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಬಿ ಎನ್ ವೈ ಎಸ್, ಬಿ.ಎಸ್ ಸಿ, ಪದವಿ, ಬಿ.ಇ ಅಥವಾ ಬಿ.ಟೆಕ್, ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳ ಗರಿಷ್ಠ ವಯಸ್ಸು 65 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 75,000 ರೂ. ಮಾಸಿಕ ವೇತನ ದೊರೆಯಲಿದೆ. ವಾರದ ರಜೆ ಅಲ್ಲದೆ ವರ್ಷಕ್ಕೆ ಒಟ್ಟು 12 ರಜೆ ಇರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಬ್ಯೂರೋ ಫಾರ್ ದಿ ಫಾರ್ಮುಲೇಷನ್ ಫಾರ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮತ್ತು ವಿಭಾಗ ಮಂಡಳಿ, ವಿಭಾಗೀಯ ಸಮಿತಿ, ಉಪಸಮಿತಿ, ಸಮಿತಿ ಸೇರಿ ಯಾವುದೇ ಸಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು https://www.services.bis.gov.in/php/BIS_2.0/ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.