ನವದೆಹಲಿ: ಮುಂಬರುವ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳಿರುವಂತೆಯೇ ಬಹುಭಾಷಾ ನಟ ಕಮಲ್ ಹಾಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ, ನಟ-ಚಲನಚಿತ್ರ ನಿರ್ಮಾಪಕರಾದ ಕಮಲ್ ಹಾಸನ್ ತಮ್ಮ ವೈಯಕ್ತಿಕ ಜೀವನ ಮತ್ತು ಮದುವೆಯ ಕುರಿತಾದ ತಮ್ಮ ದೃಷ್ಟಿಕೋನಗಳ ಬಗ್ಗೆ ಮಾತನಾಡಿದ್ದು, ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರು ನಟಿ ತ್ರಿಷಾ ಅವರ ವೈವಾಹಿಕ ಸ್ಥಿತಿಯ ಬಗ್ಗೆ ಪ್ರಶ್ನೆ ಕೇಳಿದ್ದು, ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ನಿರಾಳವಾಗಿ ಪ್ರತಿಕ್ರಿಯಿಸಿದ ತ್ರಿಶಾ, ” ಮದುವೆ ಆದರೂ, ಆಗದಿದ್ದರೂ ಪರವಾಗಿಲ್ಲ” ಎಂದು ಉತ್ತರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಕಮಲ್ ಹಾಸನ್ ತಮ್ಮ ಮದುವೆಗೆ ಸಂಬಂಧಿಸಿದ ಅನುಭವಗಳನ್ನು ಹೇಳಿಕೊಂಡರು. ಕಮಲ್ ಅವರು ಎರಡು ಮದುವೆಯಾಗಿದ್ದು, 2ನೇ ಪತ್ನಿ ಸಾರಿಕಾ ಅವರೊಂದಿಗಿನ ವಿವಾಹದಿಂದ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾನೆ. ಅದಕ್ಕೂ ಮೊದಲು ಅವರು ವಾಣಿ ಗಣಪತಿ ಎಂಬವರನ್ನು ವಿವಾಹವಾಗಿದ್ದರು.
ಈ ಕಾರ್ಯಕ್ರಮದಲ್ಲಿ, ಹಾಲಿ ಸಂಸತ್ ಸದಸ್ಯ ಜಾನ್ ಬ್ರಿಟಾಸ್ ಅವರೊಂದಿಗಿನ ಸಂದರ್ಶನದ ವೇಳೆ ನಡೆದ ಆಸಕ್ತಿದಾಯಕ ಸಂಭಾಷಣೆಯನ್ನು ಕಮಲ್ ಹಂಚಿಕೊಂಡಿದ್ದಾರೆ. ನನ್ನ ಒಳ್ಳೆಯ ಸ್ನೇಹಿತ, ಸಂಸದ ಬ್ರಿಟ್ಟಾಸ್ ಒಮ್ಮೆ, ಉತ್ತಮ ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ ನೀವು ಎರಡು ಮದುವೆಯಾಗಿದ್ದೇಕೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಕುಟುಂಬದ ಹಿನ್ನೆಲೆಗೂ ಮದುವೆಗೂ ಏನು ಸಂಬಂಧ ಎಂದು ಮರುಪ್ರಶ್ನೆ ಹಾಕಿದ್ದೆ.
ಆಗ ಬ್ರಿಟ್ಟಾಸ್ ಅವರು, ಏಕಪತ್ನಿವೃತಸ್ಥನಾದ ಶ್ರೀರಾಮನ ಉದಾಹರಣೆಯನ್ನು ಕೊಟ್ಟರು. ಅದಕ್ಕೆ ನಾನು, “ಮೊದಲನೆಯದಾಗಿ, ನಾನು ಯಾವುದೇ ದೇವರನ್ನು ನಂಬುವುದಿಲ್ಲ. ನಾನು ಶ್ರೀರಾಮನನ್ನು ಅನುಸರಿಸಿಲ್ಲ. ಬಹುಶಃ ರಾಮನ ತಂದೆಯ (ದಶರಥ) ಮಾರ್ಗವನ್ನು ಅನುಸರಿಸಿದ್ದೇನೆ (ದಶರಥನಿಗೆ ಮೂವರು ಹೆಂಡತಿಯರಿದ್ದರು. ಕೌಸಲ್ಯ (ಭಗವಾನ್ ರಾಮನ ತಾಯಿ), ಸುಮಿತ್ರಾ ಮತ್ತು ಕೈಕೇಯಿ)” ಎಂದು ಹೇಳಿದ್ದೆ ಎಂದು ಕಮಲ್ ಹಾಸನ್ ಹೇಳಿಕೊಂಡಿದ್ದಾರೆ. ಕಮಲ್ ಅವರ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.
ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ಅವರ ಥಗ್ ಲೈಫ್ ಜೂನ್ 5 ರಂದು ಬಿಡುಗಡೆಯಾಗಲಿದೆ.



















