ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಭಗವದ್ಗೀತೆ ಹಾಗೂ ನಾಟ್ಯಶಾಸ್ತ್ರಕ್ಕೀಗ ಜಾಗತಿಕ ಮನ್ನಣೆ ಸಿಕ್ಕಿದೆ. ಭಾರತದ ಪ್ರಮುಖ ಗ್ರಂಥಗಳಾದ ಭಗವದ್ಗೀತೆ ಮತ್ತು ಭರತ ಮುನಿಗಳ ನಾಟ್ಯಶಾಸ್ತ್ರಕ್ಕೆ ಯುನೆಸ್ಕೋದಿಂದ ಮನ್ನಣೆ ಸಿಕ್ಕಿದೆ. ಹೌದು, ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ʼನಲ್ಲಿ ಈ ಎರಡು ಪ್ರಮುಖ ಗ್ರಂಥಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದು ಭಾರತೀಯರ ಪಾಲಿನ ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣವಾಗಿದೆ. ಈ ಸೇರ್ಪಡೆ ನಮ್ಮ ಪ್ರಾಚೀನ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿವೆ. ಅವರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ನಲ್ಲಿ ಇರೋದೇನು
ಅದಲ್ಲದೇ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆಗೊಳಿಸಿರುವುದು ಭಾರತದ ನಾಗರಿಕ ಪರಂಪರೆಗೆ ಐತಿಹಾಸಿಕ ಕ್ಷಣ. ಈ ಜಾಗತಿಕ ಗೌರವವು ಭಾರತದ ಶಾಶ್ವತ ಬುದ್ಧಿವಂತಿಕೆ ಮತ್ತು ಕಲಾತ್ಮಕ ಪ್ರತಿಭೆಗೆ ಸಾಕ್ಷಿಯಾಗಿದೆ. ಇದು ಭಾರತದ ವಿಶ್ವದೃಷ್ಟಿಕೋನ, ನಾವು ಯೋಚಿಸುವ, ಅನುಭವಿಸುವ, ಬದುಕುವ ತಾತ್ವಿಕ ಮತ್ತು ಸೌಂದರ್ಯಕ್ಕೆ ಅಡಿಪಾಯಗಳಾಗಿವೆ. ನಾವೀಗ ಅಂತಾರಾಷ್ಟ್ರೀಯ ನೋಂದಣಿಯಲ್ಲಿ ನಮ್ಮ ದೇಶದಿಂದ 14 ಶಾಸನಗಳನ್ನು ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.


















