ಲಖನೌ: ತಂದೆ-ತಾಯಿಯ ವಿರೋಧ ಕಟ್ಟಿಕೊಂಡು ಮದುವೆಯಾಗುವ ದಂಪತಿಗೆ ಪೊಲೀಸ್ ಭದ್ರತೆ ನೀಡುವ ಅವಶ್ಯಕತೆ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಗಂಭೀರ ಪ್ರಮಾಣದಲ್ಲಿ ಜೀವ ಬೆದರಿಕೆ ಇದ್ದರೆ ಮಾತ್ರ ಪೊಲೀಸರು ಭದ್ರತೆ ನೀಡಬೇಕು. ಪ್ರತಿಯೊಂದು ಪ್ರಕರಣಗಳಲ್ಲೂ ಪೊಲೀಸ್ ಭದ್ರತೆ ನೀಡುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ತಿಳಿಸಿದೆ.
ಗಂಡ ಹಾಗೂ ಹೆಂಡತಿಯು ಭದ್ರತೆ ನೀಡಬೇಕು ಎಂದು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಶ್ರೀವಾತ್ಸವ್ ಅವರಿದ್ದ ಪೀಠವು, ಅವರ ಅರ್ಜಿಯನ್ನು ನಿರಾಕರಿಸಿತು. “ಗಂಭೀರ ಬೆದರಿಕೆ ಇಲ್ಲದ ಕಾರಣ ಪೊಲೀಸ್ ಭದ್ರತೆ ನೀಡಲು ಆಗುವುದಿಲ್ಲ. ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾದ ದಂಪತಿಯೇ ಪರಸ್ಪರ ಬೆಂಬಲ ನೀಡಬೇಕು. ಹಾಗೆಯೇ, ಸಮಾಜವನ್ನು ಎದುರಿಸುವುದನ್ನು ಕಲಿಯಬೇಕು” ಎಂದು ನ್ಯಾಯಮೂರ್ತಿ ಕಿವಿಮಾತು ಹೇಳಿದರು.
ನಮಗೆ ಜೀವ ಬೆದರಿಕೆ ಇದೆ. ಪೊಲೀಸ್ ಭದ್ರತೆ ನೀಡಬೇಕು ಎಂದು ಶ್ರೇಯಾ ಕೇಸರ್ವಾನಿ ಹಾಗೂ ಅವರ ಪತಿಯು ಅರ್ಜಿ ಸಲ್ಲಿಸಿದ್ದರು. ನಮ್ಮ ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವನ್ನು ತಡೆಯಬೇಕು. ನಮಗೆ ಭದ್ರತೆ ಒದಗಿಸಬೇಕು ಎಂಬುದಾಗಿ ಅವರು ರಿಟ್ ಅರ್ಜಿಯಲ್ಲಿ ಕೋರಿಕೆ ಸಲ್ಲಿಸಿದ್ದರು.
“ಪ್ರಕರಣದಲ್ಲಿ ದಂಪತಿಯ ಜೀವನದಲ್ಲಿ ಸಂಬಂಧಿಕರು, ಸ್ನೇಹಿತರು ಸೇರಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಪ್ರವೇಶದ ಕುರಿತು ಸಾಕ್ಷ್ಯಗಳಿಲ್ಲ. ಹಾಗೆಯೇ, ಇವರಿಗೆ ಜೀವ ಬೆದರಿಕೆ ಇರುವ ಕುರಿತು ಕೂಡ ಸರಿಯಾದ ಮಾಹಿತಿ ನೀಡಿಲ್ಲ. ಹಾಗಾಗಿ, ಇವರಿಗೆ ಪೊಲೀಸ್ ಭದ್ರತೆ ನೀಡುವ ಅವಶ್ಯಕತೆ ಇಲ್ಲ” ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.


















