ಉಡುಪಿ: ಮಲ್ಪೆ (Malpe) ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಟಾಯ್ಲೆಟ್ ನಲ್ಲಿ ನವಜಾತ ಶಿಶು ಪತ್ತೆಯಾಗಿದ್ದರಿಂದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸಿದಾಗ ಮಗುವಿನ ತಾಯಿಯ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ.
ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಮಾತನಾಡಿ, ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಾಮಿಯಾ ಮಸೀದಿ ಆವರಣದ ಶೌಚಾಲಯದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಕಾರ್ಮಿಕರಿಗೋಸ್ಕರ ನಿರ್ಮಿಸಿದ್ದ ಶೌಚಾಲಯದಲ್ಲಿ ಶವ ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಯುವತಿಯೊಬ್ಬರ ಮಗು ಇದು ಎನ್ನುವುದು ಗೊತ್ತಾಗಿದೆ. ಆ ಯುವತಿಯಿಂದ ಸ್ವ-ಇಚ್ಛಾ ಹೇಳಿಕೆ ಪಡೆಯಲಾಗಿದೆ. ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಳೆ. ಏಳೂವರೆಯಿಂದ ಎಂಟು ತಿಂಗಳು ನಡುವಯಸ್ಸಿನ ಭ್ರೂಣ ಇದಾಗಿದೆ. ಯಾವುದೇ ಪ್ರೊಸೀಜರ್ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಏಕಾಏಕಿ ಹೊಟ್ಟೆನೋವು ಬಂದಿದ್ದರಿಂದಾಗಿ ಶೌಚಾಲಯಕ್ಕೆ ತೆರಳಿದ್ದಾಳೆ. ಶೌಚಾಲಯದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಈಗ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.


















