ಸರಿಯಾಗಿ 6ರಿಂದ 7 ತಿಂಗಳಷ್ಟೇ ಬಾಕಿ ಉಳಿದಿವೆ. ನವೆಂಬರ್ ಇಲ್ಲಾ ಡಿಸೆಂಬರ್ ಹೊತ್ತಿಗೆ ಚುನಾವಣೆಗೆ ಸಜ್ಜಾಗಬೇಕಿದೆ ಬಿಹಾರ. ಮೊದಲಿನಿಂದಲೂ ದೇಶದ ರಾಜಕೀಯದ್ದೇ ಒಂದು ಲೆಕ್ಕವಾದರೆ ಬಿಹಾರದ್ದೇ ಮತ್ತೊಂದು ಲೆಕ್ಕ.
ಹೌದು! ಅನಭಿಷಕ್ತ ಸಾಮ್ರಾಟನಂತೆ ಮೆರೆಯುತ್ತಿರುವ ನಿತೀಶ್ ಕುಮಾರ್ ಗೂ ಈ ಬಾರಿ ಚುನಾವಣೆ ಅಗ್ನಿ ಪರೀಕ್ಷೆಯೇ ಸರಿ. ಪಲ್ಟು ರಾಮ್ ಅಂತಲೇ ಖ್ಯಾತರಾಗಿರುವ ನಿತೀಶ್ ಯಾವಾಗ ಯಾರೊಟ್ಟಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತಾರೆ ಎನ್ನುವುದು ಖುದ್ದು ಅವರಿಗೇ ಗೊತ್ತಿಲ್ಲ ಎಂಬ ಮಾತುಗಳಿವೆ. ಆದರೆ, ಸದ್ಯ ಬಿಜೆಪಿ ಸಖ್ಯದಲ್ಲಿ ಆಡಳಿತ ನಡೆಸಿರುವ ನಿತೀಶ್ ವಿರುದ್ಧವೀಗ ಎನ್ ಡಿಎ ಮೈತ್ರಿಯ ಅಂಗಪಕ್ಷಗಳು ಅಪಸ್ವರ ಎತ್ತಿವೆ.
ಎನ್ ಡಿಎ ದೋಸ್ತಿ ಕೂಟದಿಂದ ಆರ್ ಎಲ್ ಜೆಪಿ ಔಟ್
.ಹಿಂದಿನಿಂದಲೂ ಬಿಜೆಪಿ ನೇತೃತ್ವದ ಎನ್ ಡಿಎ ಅಂಗ ಪಕ್ಷವಾಗಿ ನಿಷ್ಠೆ ಮೆರೆದ ಕೀರ್ತಿ ಆರ್ ಎಲ್ ಜೆಪಿಯದ್ದು. ಪಶುಪತಿ ಕುಮಾರ್ ಪಾರಸ್ ದಿಢೀರ್ ಬೆಳವಣಿಗೆಯಲ್ಲಿ ಎನ್ ಡಿಎ ದೋಸ್ತಿ ಕಳಚಿಕೊಂಡಿದ್ದಾರೆ. ದೋಸ್ತಿ ನಿಷ್ಠೆ ಧರ್ಮ ಪಾಲಿಸಿದರೂ ಪಕ್ಷಕ್ಕೆ ಅನ್ಯಾಯವಾಗಿದೆ. ತಮ್ಮದು ದಲಿತರ ಪಕ್ಷ ಅನ್ನೋ ಕಾರಣಕ್ಕೆ ಸೂಕ್ತ ಸ್ಥಾನಮಾನ, ಗೌರವವನ್ನು ಬಿಜೆಪಿ-ಆರ್ ಜೆಡಿ ನೀಡಿಲ್ಲ ಅಂತಾ ಪಾರಸ್ ದೂರಿದ್ದಾರೆ. ದೋಸ್ತಿ ಕೂಟದಲ್ಲಿ ತಮ್ಮ ಯಾವ ಬೇಡಿಕೆಯೂ ಈಡೇರಿಲ್ಲ.
ಬದಲಿಗೆ ನಮ್ಮನ್ನು ಬಳಸಿಕೊಂಡು ಬಿಸಾಡಲಾಗಿದೆ ಅಂತಲೂ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿಯೇ ಈ ಬಾರಿ ಪಕ್ಷ ರಾಜ್ಯದ ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದಿದ್ದಾರೆ. ಅಷ್ಟೇ ಅಲ್ಲಾ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟದೊಟ್ಟಿಗಿನ ಮೈತ್ರಿ ಬಾಗಿಲನ್ನು ತೆರೆದಿರೋ ಪಾರಸ್, ಸೂಕ್ತ ಗೌರವ ನೀಡಿದವರಿಗೆ ನಮ್ಮ ಬೆಂಬಲ ಅಂತಾ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ದೋಸ್ತಿಗೆ ಗುಡ್ ಬೈ ಹೇಳ್ತಾರಾ ಜೀತನ್ ರಾಮ್
ಒಂದು ಕಾಲದ ನಿತೀಶ್ ಕುಮಾರ್ ಆಪ್ತ ಜೀತನ್ ರಾಮ್ ಮಾಂಝಿ ಕೂಡಾ ದೋಸ್ತಿ ವಿರುದ್ಧ ಭಿನ್ನರಾಗ ತೆಗೆದಿದ್ದಾರೆ. ಹೆಚ್ ಎಎಂ ಪಕ್ಷಕ್ಕೆ ದೋಸ್ತಿ ಕೂಟದಲ್ಲಿ ಮಾನ್ಯತೆ ಸಿಗುತ್ತಿಲ್ಲ ಅಂತಾ ದಲಿತ ಮುಖಂಡ ಧ್ವನಿ ಎತ್ತಿದ್ದಾರೆ. ಮುಂಬರೋ ಚುನಾವಣೆಯಲ್ಲಿ ಪಕ್ಷಕ್ಕೆ 35ರಿಂದ 40 ಸೀಟ್ ಗಳಿಗೆ ಮಾಂಝಿ ಡಿಮ್ಯಾಂಡ್ ಮಾಡಿದ್ದಾರೆ. ಈ ಮೂಲಕ ಹೊಸ ಸರ್ಕಾರದಲ್ಲಿ ಬಾಹುಳ್ಯ ಸಾಧಿಸೋ ಗಣಿತ ಆರಂಭಿಸಿದ್ದಾರೆ. ಆದರೆ, ಈ ಪ್ರಮಾಣದ ಸೀಟು ಬಿಟ್ಟುಕೊಡಲು ನಿತೀಶ್ ಸುತಾರಂ ತಯಾರಿಲ್ಲ.
ಈ ಸತ್ಯ ಅರಿವಾಗುತ್ತಿದ್ದಂತೆ ಮಾಂಝಿ ಕೂಡಾ ದೋಸ್ತಿ ಕೂಟದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಹೀಗಾಗಿ ಬಿಜೆಪಿ ವರಿಷ್ಠರು ಮುನಿಸಿಕೊಂಡಿರೋ ಮುಖಂಡರನ್ನು ಹೇಗೆ ಓಲೈಸುತ್ತೆ ಅನ್ನೋದು ದೊಡ್ಡ ಪ್ರಶ್ನೆ. ನಿತೀಶ್ ರಂಥಾ ಹಠಮಾರಿಯನ್ನು ನಿಯಂತ್ರಿಸಿ ದೋಸ್ತಿ ಕೂಟವನ್ನು ಸುಭದ್ರಗೊಳಿಸೋ ಸವಾಲು ಈಗ ಮೋದಿ-ಅಮಿತ್ ಶಾ ಮುಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಹಾರ ರಾಜಕೀಯ ಮತ್ತಷ್ಟು ರಂಗೇರುವ ಎಲ್ಲ ಮುನ್ಸೂಚನೆಗಳನ್ನು ಈಗಲೇ ನೀಡುತ್ತಿದೆ.



















