ಮುಂಬೈ: ಅಮೆರಿಕ ಅಧ್ಯಕ್ಷರ ನೂತನ ಸುಂಕ ನೀತಿ ವಿಶ್ವ ಷೇರುಪೇಟೆಯಲ್ಲಿ ರಕ್ತಪಾತಕ್ಕೆ ಕಾರಣವಾಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ಷೇರು ಮಾರುಕಟ್ಟೆಯಲ್ಲಿಂದು ಸೂಚ್ಯಂಕ ಪಾತಾಳಕ್ಕೆ ಕುಸಿಯಿತು. ಅದರಲ್ಲಿಯೂ ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಕರಡಿ ಕುಣಿತ ಶುರುವಾಗಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 4 ಸಾವಿರ ಅಂಕಗಳ ಕುಸಿತ ಕಾಣುವುದರೊಂದಿಗೆ ಹೂಡಿಕೆದಾರರು ಕಂಗಾಲಾಗಿ ಹೋಗಿದ್ದಾರೆ. ಆಶ್ಚರ್ಯ ಎನ್ನುವಂತೆ ಕೇವಲ 10 ಸೆಕೆಂಡ್ ನಲ್ಲಿ 20 ಲಕ್ಷ ಕೋಟಿ ಹೂಡಿಕೆ ನಷ್ಟವಾಗಿದೆ.
ಷೇರುಪೇಟೆ ಕುಸಿತಕ್ಕೆ ಕಾರಣವಾದರು ಏನು?
ಏಕಾಏಕಿ ಈ ಪ್ರಮಾಣದ ಷೇರುಪೇಟೆ ಸೂಚ್ಯಂಕ ಕುಸಿತಕ್ಕೆ ಕಾರಣ ಅಮೆರಿಕ ಅಧ್ಯಕ್ಷರ ನಿಲುವು. ಡೊನಾಲ್ಡ್ ಟ್ರಂಪ್ ಸಾರಿರುವ ತೆರಿಗೆ ಸಮರ ಸಮಸ್ತ ಜಗತ್ತಿನ ಷೇರು ಮಾರುಕಟ್ಟೆಯನ್ನೇ ಬುಡಮೇಲು ಮಾಡಿದೆ. ಟ್ರಂಪ್ ಹೊಸ ತೆರಿಗೆ ನೀತಿ ಹೇಗೆ ಪರಿಣಾಮ ಬೀರಬಹುದು ಎನ್ನುವ ಸ್ಪಷ್ಟತೆ ಹೂಡಿಕೆದಾರರಲ್ಲಿಲ್ಲ. ಹೀಗಾಗಿಯೇ ಭಾರತ ಸೇರಿದಂತೆ ಇತರೆಡೆ ಹೂಡಿಕೆ ಮಾಡಿರುವ ಉದ್ಯಮ ಜಗತ್ತು ದಿಢೀರ್ ತನ್ನ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತಿದೆ. ಪರಿಣಾಮ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತದ ಷೇರು ಮಾರುಕಟ್ಟೆ ಒಂದರಲ್ಲೇ ಒಟ್ಟಾರೆ ಮೌಲ್ಯ 403 ಲಕ್ಷ ಕೋಟಿಯಿಂದ 384 ಲಕ್ಷ ಕೋಟಿ ರೂಪಾಯಿಗೆ ಕುಸಿತವಾಗಿದೆ.