ತಿರುವನಂತಪುರಂ: ಕೇರಳ(Kerala)ದ ಪಾಲಕ್ಕಾಡ್(Palakkad) ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ನೇರಳಾತೀತ(ಯುವಿ) ವಿಕಿರಣ ಪತ್ತೆಯಾಗಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ರೆಡ್ ಅಲರ್ಟ್(Red Alert) ಘೋಷಿಸಿದೆ. ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಕಾರಣ ಸ್ಥಳೀಯರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗಿದೆ.
ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ತ್ರಿಥಲಾ ಮತ್ತು ಪೊನ್ನಾನಿಯಲ್ಲಿ ಅಳವಡಿಸಲಾಗಿರುವ ಮೀಟರ್‌ಗಳಲ್ಲಿ 11 ಯುವಿ ಸೂಚ್ಯಂಕ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11ರ ಯುವಿ ಸೂಚ್ಯಂಕವು “ಗಂಭೀರ ಕೆಟಗರಿ”ಗೆ ಸೇರುತ್ತದೆ. ಈ ವಿಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸನ್ ಬರ್ನ್, ಚರ್ಮದ ಕಾಯಿಲೆಗಳು, ಕಣ್ಣಿನ ಸಮಸ್ಯೆಗಳು ಮತ್ತು ಇತರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿಯಿರುತ್ತದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅತಿ ಹೆಚ್ಚು ಯುವಿ ಮಟ್ಟ ದಾಖಲಾಗಿವೆ. ಹೀಗಾಗಿ ಈ ಅವಧಿಯಲ್ಲಿ ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಹೊರಗೆ ದುಡಿಯುವ ಕಾರ್ಮಿಕರು, ಮೀನುಗಾರರು, ಬೈಕ್ ಸವಾರರು, ಪ್ರವಾಸಿಗರು ಮತ್ತು ಚರ್ಮ ಅಥವಾ ಕಣ್ಣಿನ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳು, ಕ್ಯಾನ್ಸರ್ ರೋಗಿಗಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರಿಗೆ ಯುವಿ ವಿಕಿರಣಗಳಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಜನರು ಮನೆಗಳಿಂದ ಹೊರಗೆ ಬರುವಾಗ ಪೂರ್ಣ ದೇಹ ಮುಚ್ಚುವಂಥ ಹತ್ತಿ ಬಟ್ಟೆಗಳನ್ನು ಧರಿಸುವಂತೆ, ಟೋಪಿಗಳು, ಛತ್ರಿಗಳು ಮತ್ತು ಸನ್ ಗ್ಲಾಸ್ ಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಉಷ್ಣವಲಯದ ಪ್ರದೇಶಗಳು ಮತ್ತು ಎತ್ತರದ ಪ್ರದೇಶಗಳು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಯುವಿ ವಿಕಿರಣವನ್ನು ಎದುರಿಸುತ್ತವೆ. ಇದಲ್ಲದೇ, ನೀರು ಮತ್ತು ಮರಳಿನಂತಹ ಪ್ರತಿಫಲನ ಮೇಲ್ಮೈಗಳು ಯುವಿ ಒಡ್ಡುವಿಕೆಯನ್ನು ತೀವ್ರಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ಅತಿಯಾದ ಯುವಿ ವಿಕಿರಣಕ್ಕೆ ಸಂಬಂಧಿಸಿದ ಆರೋಗ್ಯ ಅಪಾಯಗಳನ್ನು ತಡೆಗಟ್ಟಲು ಸಾರ್ವಜನಿಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಪ್ರಕಾರ, ಯುವಿ ವಿಕಿರಣ ಮಟ್ಟವನ್ನು ಅವುಗಳ ತೀವ್ರತೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 0-2ರ ಯುವಿ ಸೂಚ್ಯಂಕವನ್ನು ಕಡಿಮೆ ಎಂದು ಪರಿಗಣಿಸಲಾಗುತ್ತದೆ. 3-5 ಮಧ್ಯಮ ವರ್ಗಕ್ಕೆ ಸೇರುತ್ತದೆ. 6-7 ರ ನಡುವಿನ ಮಟ್ಟಗಳನ್ನು ಉನ್ನತವೆಂದು ವರ್ಗೀಕರಿಸಲಾಗಿದೆ ಮತ್ತು 8-10 ಅನ್ನು ಅತಿ ಅಧಿಕ ಎಂದೂ, 11 ಅಥವಾ ಅದಕ್ಕಿಂತ ಹೆಚ್ಚಿನ ಯಾವುದೇ ಯುವಿ ಸೂಚ್ಯಂಕವನ್ನು ವಿಪರೀತವೆಂದು ಪರಿಗಣಿಸಲಾಗುತ್ತದೆ.