ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಮಾರಿಷಸ್ ಗೆ ತೆರಳಿದ್ದು, ಅವರಿಗೆ ಸಾಂಪ್ರದಾಯಿಕ ಸ್ವಾಗತ ದೊರೆತಿದೆ. ಅನಿವಾಸಿ ಭಾರತೀಯರು ಕೂಡ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಇನ್ನು, ನರೇಂದ್ರ ಮೋದಿ (Narendra Modi) ಅವರು ಮಾರಿಷಸ್ ಅಧ್ಯಕ್ಷ ಧರಂ ಗೋಖುಲ್ ಅವರನ್ನು ಭೇಟಿಯಾಗಿದ್ದು, ಪ್ರಯಾಗರಾಜ್ ಮಹಾ ಕುಂಭಮೇಳದ ಗಂಗಾಜಲವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಂಚಿನ ಪದಾರ್ಥದಲ್ಲಿ ಗಂಗಾಜಲವನ್ನು ಧರಂ ಗೋಖುಲ್ ಅವರಿಗೆ ನೀಡಿದರು. ಅಷ್ಟೇ ಅಲ್ಲ, ಗೋಖುಲ್ ಅವರ ಪತ್ನಿ ಬೃಂದಾ ಗೋಖುಲ್ ಅವರಿಗೆ ರೇಷ್ಮೆಯಿಂದ ತಯಾರಿಸಿದ ಬನಾರಸಿ ಸೀರೆಯನ್ನು ಕೂಡ ಉಡುಗೊರೆ ನೀಡಿದರು. ಇವುಗಳ ಜತೆಗೆ ಭಾರತದ ಸಂಸ್ಕೃತಿಯನ್ನು ಸಾರುವ ಹಲವು ಉಡುಗೊರೆಗಳನ್ನು ಮೋದಿ ನೀಡಿದ್ದಾರೆ.
ಮಾರಿಷಸ್ ತಲುಪುತ್ತಲೇ ನರೇಂದ್ರ ಮೋದಿ ಅವರು ಪ್ರಧಾನಿ ನವೀನ್ ಚಂದ್ರ ರಾಮ್ ಗೂಲಂ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ ಸರ್ ಸೀವೂಸಗುರ್ ರಾಮ್ ಗೂಲಂ ಬೊಟ್ಯಾನಿಕಲ್ ಗಾರ್ಡನ್ ನಲ್ಲಿ ಸಸಿ ನೆಟ್ಟರು.

ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮ್ಗೂಲಂ ಅವರ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಭೇಟಿ ನೀಡುತ್ತಿದ್ದು, ಬುಧವಾರ ರಾಷ್ಟ್ರೀಯ ದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದ್ವೀಪ ರಾಷ್ಟ್ರದ ಜತೆ ದ್ವಿಪಕ್ಷೀಯ ಮಾತುಕತೆ, ಸಾಗರ ಸುರಕ್ಷತೆ, ವ್ಯಾಪಾರ- ವಹಿವಾಟು ಸೇರಿ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.