ನವದೆಹಲಿ: ಇತ್ತೀಚೆಗೆ ಭಾರತದ ಯುವಕ ಹಾಗೂ ಪಾಕಿಸ್ತಾನದ ಯುವತಿ ಮಧ್ಯೆ ಪ್ರೇಮ ಪ್ರಹಸನಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಪಾಕಿಸ್ತಾನದ ಸೀಮಾ ಹೈದರ್, ಭಾರತದ ಸಚಿನ್ ನನ್ನು ಹುಡುಕಿಕೊಂಡು ಇಲ್ಲಿಗೆ ಆಗಮಿಸಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ, ಗಡಿಯಾಚೆಗಿನ ಮತ್ತೊಂದು ಪ್ರೇಮ ಪ್ರಹಸನ ಸುದ್ದಿಯಾಗಿದೆ.
ಹೌದು, ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಆರ್ ಪಿಎಫ್ ಯೋಧ ಮುನೀರ್ ಅಹ್ಮದ್ ಹಾಗೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮನೇಲ್ ಖಾನ್ ಅವರು ಪರಸ್ಪರ ಜಾಲತಾಣದಲ್ಲಿ ಪರಿಚಯವಾಗಿದ್ದಾರೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮದುವೆಯಾಗಲೂ ಒಪ್ಪಿಕೊಂಡಿದ್ದಾರೆ. ಆದರೆ, ಭಾರತಕ್ಕೆ ಬರಲು ವೀಸಾ ಸಿಗದ ಕಾರಣ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಇಬ್ಬರೂ ಮದುವೆಯಾಗಿದ್ದಾರೆ.
ಇದಾದ ಬಳಿಕ ಮನೇಲ್ ಖಾನ್ ಅವರಿಗೆ 15 ದಿನಗಳ ವೀಸಾ ಸಿಕ್ಕಿದೆ. ಇದರಿಂದಾಗಿ ಅವರು ಭಾರತಕ್ಕೆ ಆಗಮಿಸಿದ್ದು, ಕಾಶ್ಮೀರ ತಲುಪಿದ್ದಾರೆ. ಮುನೀರ್ ಅಹ್ಮದ್ ಅವರ ಮನೆಯವರು ಶಾಸ್ತ್ರೋಕ್ತವಾಗಿ ವಧುವನ್ನು ಸ್ವಾಗತಿಸಿದ್ದಾರೆ. ಇದಾದ ಬೆನ್ನಲ್ಲೇ, ಪ್ರಕರಣದ ಕುರಿತು ಮಾಹಿತಿ ಪಡೆದ ಗುಪ್ತಚರ ಸಂಸ್ಥೆಗಳು, ಮನೇಲ್ ಖಾನ್ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಮನೇಲ್ ಖಾನ್ ಅವರು ಮರಳಿ ಪಾಕಿಸ್ತಾನಕ್ಕೆ ತೆರಳುವ ಮೊದಲು ಮುನೀರ್ ಅಹ್ಮದ್ ಜತೆ ಸಾಂಪ್ರದಾಯಿಕವಾಗಿ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮನೇಲ್ ಖಾನ್ ಅವರ ಮನೆಯವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.